ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ನಿವಾರಣೆಗೆ ಇದೀಗ ಆಡಳಿತ ವ್ಯವಸ್ಥೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಮನೆಯಿಂದ ಕಸ ನೀಡುವಾಗ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸದೇ, ಮಿಶ್ರ ಕಸವನ್ನು ನೀಡಿದರೆ ಸ್ಥಳದಲ್ಲೇ ದಂಡ ಪಾವತಿಸಬೇಕಾಗುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬೆಂ.ಘ.ನಿ.ನಿ) ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ನಿಯಮ ಉಲ್ಲಂಘಿಸುವವರಿಗೆ 200 ರೂ. ನಿಂದ 500 ರೂ. ವರೆಗೆ ದಂಡ ವಿಧಿಸಲು ನಿರ್ಧರಿಸಿದೆ.
ಈ ಕುರಿತು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ನಗರದ ಕಸ ನಿರ್ವಹಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಮನೆ ಬಾಗಿಲಲ್ಲೇ ನಡೆಯಲಿದೆ ಕಸದ ಪರೀಕ್ಷೆ
ತ್ಯಾಜ್ಯ ಸಂಗ್ರಹಣೆ ಕೇವಲ ಪೌರಕಾರ್ಮಿಕರ ಜವಾಬ್ದಾರಿಯಾಗಿ ಉಳಿಯದೆ, ಇದರ ಮೇಲೆ ನಿಗಾ ಇಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಸಂದರ್ಭದಲ್ಲಿ ಮಾರ್ಷಲ್ಗಳು ಮತ್ತು ಲಿಂಕ್ ವರ್ಕರ್ಗಳು ಸ್ಥಳದಲ್ಲಿಯೇ ಹಾಜರಿರುತ್ತಾರೆ. ಸಾರ್ವಜನಿಕರು ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಯಾರಾದರೂ ನಿರಂತರವಾಗಿ ಮಿಶ್ರ ತ್ಯಾಜ್ಯವನ್ನೇ ನೀಡುತ್ತಿದ್ದರೆ, ಅಂತಹವರಿಗೆ ತಕ್ಷಣವೇ 200 ರೂಪಾಯಿಯಿಂದ 500 ರೂಪಾಯಿಯ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೆಳಗ್ಗೆ 5.30 ರಿಂದಲೇ ಕಾರ್ಯಚರಣೆ ಆರಂಭ
ನಗರದಲ್ಲಿ ತ್ಯಾಜ್ಯ ಸಂಗ್ರಹಣೆಗೆ ವೈಜ್ಞಾನಿಕ ಹಾಗೂ ಶಿಸ್ತುಬದ್ಧ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಅನ್ವಯ:
ಪ್ರತಿನಿತ್ಯ ಬೆಳಿಗ್ಗೆ 5.30 ರಿಂದ 6.30 ರವರೆಗೆ ಆಟೋ ಟಿಪ್ಪರ್ಗಳು ಕಾರ್ಯನಿರ್ವಹಿಸಲಿವೆ.
ಮಸ್ಟರಿಂಗ್ ಪಾಯಿಂಟ್ನಲ್ಲಿ ಆರ್ಎಫ್ಐಡಿ (RFID) ತಂತ್ರಜ್ಞಾನದ ಮೂಲಕ ಹಾಜರಾತಿ ದಾಖಲಿಸಲಾಗುತ್ತದೆ.
ಮೊದಲಿಗೆ ರಸ್ತೆ ಬದಿ ಕಸ ಸುರಿಯುವ ಬ್ಲಾಕ್ ಸ್ಪಾಟ್ಗಳಿಗೆ ತೆರಳಿ ಅಲ್ಲಿನ ಮಿಶ್ರ ತ್ಯಾಜ್ಯವನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ವಿಂಗಡಿಸಿ ಕಾಂಪ್ಯಾಕ್ಟರ್ಗಳಿಗೆ ರವಾನಿಸಲಾಗುತ್ತದೆ.
ಬಳಿಕ ಬೆಳಿಗ್ಗೆ 10.30 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಕಸ ಸಂಗ್ರಹಣೆ ಮಾಡಲಾಗುತ್ತದೆ.
ಸಂಗ್ರಹಣೆ ಕಾರ್ಯ ಮುಗಿದ ನಂತರ ಮತ್ತೆ ಬ್ಲಾಕ್ ಸ್ಪಾಟ್ಗಳ ಮರುಪರಿಶೀಲನೆ ನಡೆಸಿ, ಅಲ್ಲಿ ಯಾರಾದರೂ ಕಸ ಬಿಸಾಡಿದ್ದರೆ ತಕ್ಷಣ ತೆರವುಗೊಳಿಸಲಾಗುತ್ತದೆ.
ಪೌರಕಾರ್ಮಿಕರಿಗೆ ನಿಗದಿತ ಗುರಿ
ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರು ಬೆಳಿಗ್ಗೆ 6.30ಕ್ಕೆ ಹಾಜರಾತಿ ದಾಖಲಿಸಿ ತಮ್ಮ ಕಾರ್ಯ ಆರಂಭಿಸಲಿದ್ದಾರೆ. ವಾರ್ಡ್ ರಸ್ತೆಗಳಲ್ಲಿ ಪ್ರತಿ 750 ಮೀಟರ್ ವ್ಯಾಪ್ತಿಯನ್ನು ಒಬ್ಬ ಪೌರಕಾರ್ಮಿಕರಿಗೆ ನಿಗದಿಪಡಿಸಲಾಗಿದ್ದು, ಅವರು ಆ ವ್ಯಾಪ್ತಿಯ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಾರೆ. ಬೆಳಿಗ್ಗೆ 10.30 ರ ನಂತರ ಪ್ರಮುಖ ರಸ್ತೆಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಲು ಸೂಚನೆ ನೀಡಲಾಗಿದೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರ ಮಾದರಿ ಸಾಧನೆ
ತ್ಯಾಜ್ಯ ನಿರ್ವಹಣೆಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರವು ಇಡೀ ನಗರಕ್ಕೆ ಮಾದರಿಯಾಗಿ ನಿಂತಿದೆ. ಪ್ರಸ್ತುತ ಇಲ್ಲಿ ಶೇ.95 ರಷ್ಟು ತ್ಯಾಜ್ಯ ವಿಂಗಡಣೆ ಪ್ರಗತಿ ಸಾಧಿಸಲಾಗಿದೆ ಎಂದು ಸಿಇಒ ಕರೀಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಾರಂಭದಲ್ಲಿ ಕೇವಲ ಶೇ.61 ರಷ್ಟಿದ್ದ ತ್ಯಾಜ್ಯ ವಿಂಗಡಣೆ ಪ್ರಮಾಣ, ಸಾರ್ವಜನಿಕರ ಸಹಕಾರ ಮತ್ತು ಅಧಿಕಾರಿಗಳ ಪರಿಶ್ರಮದಿಂದ ಶೇ.95ಕ್ಕೆ ಏರಿಕೆಯಾಗಿದೆ. ರಾಜಾಜಿನಗರದ 7 ವಾರ್ಡ್ಗಳಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಬರೋಬ್ಬರಿ 14 ಕಾಂಪ್ಯಾಕ್ಟರ್ಗಳು, 137 ಆಟೋ ಟಿಪ್ಪರ್ಗಳು, 274 ಚಾಲಕರು ಹಾಗೂ ಸಹಾಯಕರು ಮತ್ತು 347 ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಜನಜಾಗೃತಿಯೇ ಯಶಸ್ಸಿನ ಗುಟ್ಟು
ರಾಜಾಜಿನಗರದ ಈ ಯಶಸ್ಸಿನ ಹಿಂದೆ ಬಲವಾದ ಜಾಗೃತಿ ಕಾರ್ಯಕ್ರಮಗಳ ಪಾತ್ರವಿದೆ. ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ ಕುರಿತು ನಿರಂತರ ಜಾಥಾಗಳು, ಧ್ವನಿವರ್ಧಕಗಳ ಮೂಲಕ ಪ್ರಚಾರ, ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಅಡಿಯಲ್ಲಿ ಶಾಲೆ, ಕಾಲೇಜು, ಉದ್ಯಾನವನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಾಧನೆಯ ಹಿನ್ನೆಲೆಯಲ್ಲಿ ಮಾತನಾಡಿದ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ವ್ಯಾಪ್ತಿಯಲ್ಲಿ ರಾಜಾಜಿನಗರ ಮೊದಲ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಇದಕ್ಕೆ ಸಹಕರಿಸಿದ ಸಮಸ್ತ ನಾಗರಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಶೇ.100 ರಷ್ಟು ತ್ಯಾಜ್ಯ ವಿಂಗಡಣೆ ಗುರಿ ಸಾಧಿಸಲು ಸಾರ್ವಜನಿಕರು ಇದೇ ರೀತಿ ಸಹಕರಿಸಬೇಕೆಂದು ಮನವಿ ಮಾಡಿದರು.








