ಬೆಂಗಳೂರು : ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ. ಜೆ. ಹಳ್ಳಿಯಲ್ಲಿ ನಡೆದ ಗಲಭೆ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಮುಖಂಡರು ಘಟನೆ ಬಗ್ಗೆ ತಮ್ಮದೇಯಾದ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಎಲ್ಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಎಲ್ಲ ಬೆಳೆವಣಿಗೆಗಳ ಮದ್ಯೆ ದಾಂಧಲೆಗೆ ಗಲಭೆಕೋರರನ್ನು ಪ್ರಚೋದಿಸಿದ ವ್ಯಕ್ತಿಯ ಬಗ್ಗೆ ಈಗ ಮಾಹಿತಿ ಲಭ್ಯವಾಗಿದೆ. ಈ ಹಿಂಸಾಚಾರಕ್ಕೆ ಗಲಭೆಕೋರರನ್ನು ಪ್ರಚೋದಿಸಿದ್ದು, ಮುದಾಸೀರ್ ಅಹಮ್ಮದ್ ಎಂಬುವರು ಎಂದು ತಿಳಿದುಬಂದಿದೆ.
ಮುದಾಸೀರ್ ಅಹಮ್ಮದ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೆಂಬಲಿಗರು ಹಾಗೂ ಗಲಭೆಕೋರರನ್ನು ದಾಂಧಲೆ ನಡೆಸಲು ಡಿಜೆಹಳ್ಳಿಗೆ ಆಗಮಿಸುವಂತೆ ಮನವಿ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಸದ್ಯ ಮುದಾಸೀರ್ ಸಾಮಾಜಿಕ ಜಾಲತಾಣದಲ್ಲಿ ಗಲಭೆಕೋರರನ್ನು ಡಿಜೆಹಳ್ಳಿಗೆ ಆಗಮಿಸುವಂತೆ ಕರೆ ನೀಡಿರುವ ಪೋಸ್ಟ್ ಬಹಿರಂಗಗೊಂಡಿದೆ. ಈತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.