ಹುಬ್ಬಳ್ಳಿ : ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ. ಜೆ. ಹಳ್ಳಿಯಲ್ಲಿ ನಡೆದ ಗಲಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಖಂಡಿಸಿದ್ದು, ಈ ಹಿಂಸಾಚಾರದ ಹಿಂದೆ ರಾಜಕೀಯ ಪಕ್ಷಗಳ ಕುತಂತ್ರವಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಟೀಲ್, ‘ಕೋವಿಡ್ ನಿಯಂತ್ರಣ ಹಾಗೂ ನೆರೆಯಿಂದ ಸಂಕಷ್ಟದಲ್ಲಿರುವ ಜನರ ರಕ್ಷಣೆ ವಿಚಾರದಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲೆಡೆಯೂ ಶಾಂತಿ ನೆಲೆಸಿದೆ. ಇದನ್ನು ಸಹಿಸದೆ ರಾಜಕೀಯ ಪಕ್ಷಗಳು ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಎರಡು ದಿನ ಮೊದಲು ಕಾರ್ಯಕ್ರಮದಲ್ಲಿ ಗದ್ದಲವಾದರೆ ಬೆಂಕಿ ಬೀಳಬಹುದು ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದರು. ಅಲ್ಲಿ ಅದೇ ರೀತಿ ಆಯಿತು’ ಎಂದು ವಾಗ್ದಾಳಿ ನಡೆಸಿದರು.
ಇನ್ನು ಬೆಂಗಳೂರಿನ ಘಟನೆಯನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ರಾಜ್ಯದಲ್ಲಿ ವಿನಾಕಾರಣ ದಾಂದಲೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ದಿಢೀರನೆ ಹಿಂಸಾಚಾರ ನಡೆಸಲು ದುಷ್ಕರ್ಮಿಗಳಿಗೆ ಅಷ್ಟೊಂದು ಕಲ್ಲುಗಳು ಹಾಗೂ ಪೆಟ್ರೋಲ್ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ ಕಟೀಲ್, ಇವೆಲ್ಲದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಜೊತೆಗೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಮತ, ಧರ್ಮಗಳ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ ಎಂದರು.