Bengaluru : ನಕಲಿ ವೈದ್ಯನ ಇಂಜೆಕ್ಷನ್ ನಿಂದ ನರಕ ಯಾತನೆ ಅನುಭವಿಸುತ್ತಿರು ಮಹಿಳೆ – ವೈದ್ಯ ಅರೆಸ್ಟ್…
ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳಿಗೆ ನಕಲಿ ಚುಚ್ಚು ಮದ್ದು ನೀಡಿ ಆರೋಗ್ಯ ಹದಗೆಡಿಸಿದ ಆರೋಪದ ಮೇಲೆ ನಕಲಿ ವೈದ್ಯನನ್ನ ಬೆಂಗಳೂರಿನ ರಾಜಗೋಪಾಲ ನಗರ ಪೊಲೀಸರು ಬಂದಿಸಿದ್ದಾರೆ. ಸಂಜೀವಿನಿ ನಗರದಲ್ಲಿದ್ದ ಸಹನಾ ಪಾಲಿ ಕ್ಲಿನಿಕ್ ನಡೆಸುತ್ತಿದ್ದ ಮಾಲೀಕ ಕುಮಾರಸ್ವಾಮಿ, ನಕಲಿ ವೈದ್ಯ ನಾಗರಾಜ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್ 25 ರಂದು ಜ್ಯೋತಿ ಎಂಬ ಮಹಿಳೆ ಜ್ವರ ಎಂದು ಸಹನಾ ಪಾಲಿ ಕ್ಲಿನಿಕ್ಗೆ ಚಿಕಿತ್ಸೆಗೆ ಹೋಗಿದ್ದರು. ಆಗ ನಕಲಿ ವೈದ್ಯ ನಾಗರಾಜ್ ಮಹಿಳೆಯ ಸೊಂಟಕ್ಕೆ ಇಂಜೆಕ್ಷನ್ ನೀಡಿದ್ದ. ನಂತರ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕಪ್ಪಾಗಲು ಶುರುವಾಗಿತ್ತು.
ಇದರಿಂದ ಆತಂಕಗೊಂಡ ಜ್ಯೋತಿ ನೋವು ಮತ್ತು ಊತದ ಕಾರಣ ನೀಡಿ ಮತ್ತೆ ಕ್ಲೀನಿಕ್ ಗೆ ಹೋಗಿದ್ದಾರೆ. ಆಗ ಹಚ್ಚಿಕೊಳ್ಳಲು ಕ್ರೀಮ್ ಒಂದನ್ನು ನೀಡಿ ನಕಲಿ ವೈದ್ಯ ನಾಗರಾಜ್ ಕಳಿಸಿದ್ದಾನೆ. ಆದರೆ ಅದು ಕಡಿಮೆಯಾಗದೆ ಇಂಜೆಕ್ಷನ್ ಕೊಟ್ಟಿದ್ದ ಜಾಗದಲ್ಲಿ ಕೀವು ಬರಲು ಶುರುವಾಗಿದೆ.
ಈ ಕುರಿತು ಕೇಳಲು ಹೋದ್ರೆ ಬೇರೆ ಆಸ್ಪತ್ರೆಗೆ ತೋರಿಸಿಕೊಳ್ಳುವಂತೆ ಸೂಚಿಸಿದ್ದಾನೆ. ಅಷ್ಟೇ ಅಲ್ಲದೆ, ಚಿಕಿತ್ಸಾ ವೆಚ್ಚವನ್ನು ತಾನೇ ಭರಿಸುವುದಾಗಿ ಹೇಳಿದ್ದಾನೆ. ಅದರಂತೆ ಜ್ಯೋತಿ ಖಾಸಗಿ ಆಸ್ಪತ್ರೆಗೆ ತೋರಿಸಿದಾಗ, ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದರಂತೆ ವೈದ್ಯರು ಕೀವು ತುಂಬಿದ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕೊಳೆತ ಮಾಂಸವನ್ನು ಹೊರತೆಗೆದು ಹೊಲಿಕೆ ಹಾಕಿದ್ದರು. ಇಷ್ಟಾದರೂ ಮಹಿಳೆ ಸಂಪೂರ್ಣವಾಗಿ ಇನ್ನೂ ಚೇತರಿಸಿಕೊಂಡಿಲ್ಲ.
ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡ್ತಿದ್ದ ಜ್ಯೋತಿ, ನಕಲಿ ವೈದ್ಯ ನಾಗರಾಜ್ ನಿರ್ಲಕ್ಷ್ಯ ತನದಿಂದ ನೋವು ಅನುಭವಿಸುತ್ತಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ರಾಜಗೋಪಾಲನಗರ ಪೊಲೀಸರು ಮಾಲಿಕ ಮತ್ತು ವೈದ್ಯನನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ನಾಗರಾಜ್ ವೈದ್ಯನೆ ಅಲ್ಲ ನಕಲಿ ಸರ್ಟಿಫಿಕೆಟ್ ಹೊಂದಿದ್ದಾನೆ ಎಂದು ತಿಳಿದುಬಂದಿದೆ.
Bengaluru : Woman suffering from fake doctor’s injection – doctor arrested…








