ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ : ಪ್ರತಾಪ್ ಸಿಂಹ
ಮಡಿಕೇರಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ. ಖುರಾನ್ ಮತ್ತು ಬೈಬಲ್ ಧಾರ್ಮಿಕ ಗ್ರಂಥಗಳು. ಭಗವದ್ಗೀತೆಯಲ್ಲಿ ಜೀವನದ ಪಾಠ ಇದೆ, ನೈತಿಕತೆ ಇದೆ. ಅದು ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಭೋದಿಸುತ್ತದೆ. ಭಗವದ್ಗೀತೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಎಂದು ಹೇಳಿದರು.
ಅಲ್ಲದೇ ಬೇರೆ ಧರ್ಮಗ್ರಂಥಗಳಂತೆ ಭಗವದ್ಗೀತೆಯನ್ನು ಭಾವಿಸಬೇಡಿ. ಇದನ್ನು ಕಂಡಿತ ಪಠ್ಯದಲ್ಲಿ ಅಳವಡಿಸಲೇಬೇಕು ಎಂದು ಕೇಳಿಕೊಂಡರು.
ಇನ್ನೂ ಹಿಜಾಬ್ ಕುರಿತು ಮಾತನಾಡಿದ ಅವರು, ಧರ್ಮನೇ ಸುಪ್ರೀಂ ಅಂತ ಹೇಳುತ್ತಾರೆ. ದೇಶಕ್ಕಿಂತ ಧರ್ಮನೇ ಮುಖ್ಯ ಎನ್ನುತ್ತಿದ್ದಾರೆ. ಇದು ಹಿಜಾಬ್ ವಿಷಯದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಕೋರ್ಟ್ ತೀರ್ಪನ್ನೇ ಧಿಕ್ಕರಿಸಿದ್ದಾರೆ. ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅವರಿಗೆ ಅಂದೇ ಇದೆಲ್ಲಾ ಗೊತ್ತಾಗಿತ್ತು. ನಮ್ಮ ಜನರಿಗೆ ಈಗ ಅರ್ಥವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿನ್ನೆ ಗುಜರಾತ್ನಲ್ಲಿ ಭಗವದ್ಗೀತೆ ಪಠ್ಯಕ್ಕೆ ಸೇರಿಸಲಾಗುವುದು ಎಂದು ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿಯೂ ರಾಜ್ಯದ ಶಾಲಾ – ಕಾಲೇಜು ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ಕೆಸರೆಚಾಟಕ್ಕು ಕಾರಣವಾಗಿದೆ.









