ಬೆಂಗಳೂರಿನಲ್ಲಿ ಏನೇನಿದೆ, ಏನೇನಿಲ್ಲ…!
ಬಿಎಂಟಿಸಿ ಬಸ್, ಮೆಟ್ರೋ, ಕೆಎಸ್ಆರ್ಟಿಸಿ ಬಸ್ ಸಂಚಾರ- ಇದೆ
ಆಟೋ, ಓಲಾ-ಉಬರ್ ಕ್ಯಾಬ್ ಸಂಚಾರ- ಇದೆ
ಹೋಟೆಲ್, ಅಂಗಡಿ-ಮುಂಗಟ್ಟು, ದಿನಸಿ ಅಂಗಡಿ- ಓಪನ್
ಮೆಡಿಕಲ್ ಶಾಪ್, ಆಸ್ಪತ್ರೆಗಳು, ಬಾರ್, ಥಿಯೇಟರ್- ಓಪನ್
ಮಾಲ್ಗಳು ಹಾಗೂ ತರಕಾರಿ ಮಾರುಕಟ್ಟೆ- ಇದೆ
ಬೆಂಗಳೂರು: ಅನ್ನದಾತನ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ರಾಜಧಾನಿ ಬೆಂಗಳೂರು ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲ ಜಿಲ್ಲೆಗಳಲ್ಲಿ ವಾಹನ ಸಂಚಾರ್ ಬಂದ್ ಆಗಿದ್ದು, ಬೆಳ್ಳಂಬೆಳಿಗ್ಗೆಯೇ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್ನ ಬಿಸಿ ತಟ್ಟಿದೆ.
ಕರ್ನಾಟಕ ಬಂದ್ ಆಗಿ ಕೇವಲ 3 ದಿನಗಳ ನಂತರ ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಜನರಿಂದ ಯಾವುದೇ ಬೆಂಬಲ ಸಿಕ್ಕಿಲ್ಲ. ಬಿಎಂಟಿಸಿ, ಮೆಟ್ರೋ ಸಂಚಾರ ಎಂದಿನಂತೆ ಸಾಗಿದ್ದು, ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೂ ಯಾವುದೇ ತೊಂದರೆಯಾಗಿಲ್ಲ.
ಆಟೋಗಳು ರಸ್ತೆಗಿಳಿದಿದ್ದು, ಓಲಾ-ಉಬರ್ ಕ್ಯಾಬ್ಗಳು ಸಹ ಓಡಾಡುತ್ತಿವೆ. ಹೋಟೆಲ್, ಅಂಗಡಿ-ಮುಂಗಟ್ಟು, ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್, ಆಸ್ಪತ್ರೆಗಳು, ಬಾರ್, ಥಿಯೇಟರ್, ಮಾಲ್ಗಳು ಹಾಗೂ ತರಕಾರಿ ಮಾರುಕಟ್ಟೆಗಳು ಸಹ ಎಂದಿನಂತೆ ಓಪನ್ ಆಗಿದ್ದು, ಬಂದ್ನ ಯಾವುದೇ ವಾತಾವರಣ ಕಂಡು ಬರುತ್ತಿಲ್ಲ.
ನಗರದಲ್ಲಿ ಕಳೆದ ರಾತ್ರಿಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿರುವ ಕಾರಣ ಜನರು ಮನೆಗಳಿಂದ ಹೊರ ಬಂದಿಲ್ಲ. ಹೀಗಾಗಿ ಬಿಎಂಟಿಸಿ ಬಸ್ಗಳು ಜನರಿಲ್ಲದೆ ಖಾಲಿ ಓಡಾಡುತ್ತಿವೆ.
ಬೆಳಿಗ್ಗೆ 11 ಗಂಟೆ ನಂತರ ರೈತ ಸಂಘಟನೆಗಳು ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ವಿಧಾನಸೌಧ ಚಲೋ ನಡೆಸಲು ತೀರ್ಮಾನಿಸಿದ್ದು, ವಾಟಾಳ್, ಕರವೇ ಸೇರಿದಂತೆ ಕನ್ನಡಪರ ಸಂಘಟನೆಗಳು ಟೌನ್ಹಾಲ್ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಭಾರತ್ ಬಂದ್ ಬೆಂಬಲಿಸಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಭಾರತ್ ಬಂದ್ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತ್ ಬಂದ್ ಬೆಂಬಲಿಸಿ ರೈತ ಹೊರಾಟಗಾರರು ಬೈಕ್ ರ್ಯಾಲಿ ಮಾಡಿ ಬಸ್ ಸಂಚಾರ ತಡೆಯಲು ಯತ್ನಿಸಿದ್ದಾರೆ. ಹುಬ್ಬಳ್ಳಿಯ ಹೊಸೂರು depo ಬಳಿ ಧರಣಿ ನಡೆಸುತ್ತಿದ್ದ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಬಸ್ ತಡೆದ ರೈತ ಹೊರಾಟಗಾರರಿಗೆ ಡಿಸಿಪಿ ಬಸರಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ಕೈ ಬಿಡದಿದ್ದರೆ ಪ್ರತಿಭಟನಾಕಾರರನ್ನು ಬಂಧಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಂತೆ ಹೋರಾಟಗಾರರು ಹಾಗೂ ಡಿಸಿಪಿ ನಡುವೆ ವಾಗ್ವಾದ ನಡೆದಿದೆ.
ಭಾರತ್ ಬಂದ್ ಹಿನ್ನೆಲೆ ಕೊಪ್ಪಳದಲ್ಲಿ ರಾಜ್ಯ ರೈತರ ಹಿತರಕ್ಷಣಾ ವೇದಿಕೆ, ಕೃಷಿ ಹಾಗೂ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪ್ರಧಾನಿ ಮೋದಿ ಅಣಕು ಶವಯಾತ್ರೆ, ಪ್ರತಿಕೃತಿ ದಹನ ಮಾಡಿದ್ದಾರೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ್ ಬಂದ್ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿವಿಧ ಸಂಘಟನೆಗಳು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿವೆ. ಬಿಎಸ್ಪಿ, ಸಿಪಿಐಎಂಎಲ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.