ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಇಂದು ಭಾರತ್ ಬಂದ್‍ಗೆ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.

ನಗರದ ಟೌನ್‍ಹಾಲ್ ಮುಂದೆ ಜಮಾಯಿಸಿದ ರೈತ ಸಂಘ, ಹಸಿರುಸೇನೆ, ಕಬ್ಬುಬೆಳೆಗಾರರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಚಳವಳಿ ವಾಟಾಳ್ ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮ್ಮನಹಳ್ಳಿ ಬ್ರಿಡ್ಜ್‍ನಿಂದ ವಾಟಾಳ್ ನಾಗರಾಜ್ ರ್ಯಾಲಿ ಮೂಲಕ ಬಂದರೆ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಮೂಲೆ ಮೂಲೆಗಳಿಂದ ಬಂದು ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದರು. ಟೌನ್‍ಹಾಲ್ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ರೈತ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಟೌನ್‍ಹಾಲ್‍ಗ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗಮಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.

ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲ ಸದಾ ಇದೆ. ಈ ಕಾರಣಕ್ಕಾಗಿಯೇ ನಾನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಟೌನ್‍ಹಾಲ್ ಮುಂದೆ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಕೆ.ಜಿ ರಸ್ತೆ ಮೂಲಕ ಫ್ರೀಡಂಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಫ್ರೀಡಂಪಾರ್ಕ್ ತಲುಪಿದ ನಂತರ ಭಾರತ್ ಬಂದ್ ಅಂಗವಾಗಿ ನಡೆದ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ರೈತ ಮುಖಂಡರು, ನಾಳೆ ರೈಲ್ವೆ ನಿಲ್ದಾಣದಿಂದ ವಿಧಾನಸೌಧ ಚಲೋ ನಡೆಸಿ ಬಾರುಕೋಲು ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಟ್ರಾಫಿಕ್ ಜಾಮ್ ಬಿಸಿ..
ಭಾರತ್ ಬಂದ್‍ಗೆ ಕರೆ ನೀಡಿದ್ದರೂ ಬೆಂಗಳೂರು ನಗರದಲ್ಲಿ ಬಂದ್‍ನ ಬಿಸಿ ತಟ್ಟಲೇ ಇಲ್ಲ. ನಗರದಲ್ಲಿ ಬಿಎಂಟಿಸಿ ಬಸ್, ಮೆಟ್ರೋ, ಆಟೋ, ಓಲಾಉಬರ್, ಹೋಟೆಲ್, ಮಾರುಕಟ್ಟೆ, ಅಂಗಡಿ-ಮುಂಗಟ್ಟುಗಳಿಗೆ ಭಾರತ್ ಬಂದ್‍ನಿಂದ ಯಾವುದೇ ಅಡ್ಡಿ ಆಗಲಿಲ್ಲ.
ಜನರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಭಾರತ್ ಬಂದ್ ಕೇವಲ ಟೌನ್‍ಹಾಲ್ ಮುಂದೆ ಪ್ರತಿಭಟನೆಗಷ್ಟೇ ಸೀಮಿತವಾಯಿತು. ಆದರೆ, ಟೌನ್‍ಹಾಲ್ ಮುಂದೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ ಹಿನ್ನಲೆಯಲ್ಲಿ ಕೆಲ ಘಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್‍ನ ಬಿಸಿ ಅಂಬ್ಯುಲೆನ್ಸ್‍ಗಳಿಗೂ ತಟ್ಟಿತು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಟೌನ್‍ಹಾಲ್ ಸುತ್ತಮುತ್ತ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೂ ಟ್ರಾಫಿಕ್ ಜಾಮ್‍ನಿಂದ ಸವಾರರು ಪರದಾಡಿದರು. ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ನತ್ತ ರ್ಯಾಲಿ ತೆರಳುತ್ತಿದ್ದಂತೆ ಕೆಲ ಸಮಯದ ನಂತರ ಟ್ರಾಫಿಕ್ ಜಾಮ್ ತಿಳಿಗೊಳಿಸಲು ಪೊಲೀಸರು ಹರಸಾಹಸ ನಡೆಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








