Bhaskar Rao : ಆಮ್ ಆದ್ಮಿ ತೊರೆದು ಕಮಲದ ಕೈಹಿಡಿದ ಭಾಸ್ಕರ್ ರಾವ್…
ಕರ್ನಾಟಕದಲ್ಲಿ ನೆಲೆಕಂಡುಕೊಳ್ಳುವ ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಮುಖ್ಯಸ್ಥ ಕೇಜ್ರೀವಾಲ್ ಕನಸಿಗೆ ಹಿನ್ನಡೆಯಾಗಿದೆ. ಕೇಜ್ರಿವಾಲ್ ರಾಜ್ಯಕ್ಕೆ ಆಗಮಿಸಲು ಸಜ್ಜಾಗಿರುವ ಬೆನ್ನಲ್ಲೆ ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಶಾಕ್ ನೀಡಿದ್ದು, ಪಕ್ಷ ತೊರೆದು ಬುಧವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಭಾಸ್ಕರ್ ರಾವ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಭಾಸ್ಕರ್ ರಾವ್ ಅವರನ್ನು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಭಾಸ್ಕರ್ ರಾವ್ ಜೊತೆ ಅವರ ಬೆಂಬಲಿಗರು ಬಿಜೆಪಿ ಸೇರಿದರು.
ನಂತರ ಮಾತನಾಡಿದ ಭಾಸ್ಕರ್ ರಾವ್, ಎಎಪಿ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಅದು ಸಾಧ್ಯವಾಗುತ್ತಿಲ್ಲ. ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಅಳವಾಗಿ ಮೈಗೂಡಿಸಿಕೊಂಡಿರುವ ಬಿಜೆಪಿ ಸೇರಿದ್ದೇನೆ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ. ಹಾಗಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ತಿಳಿಸಿದರು.
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಭಾಸ್ಕರ್ ರಾವ್ ಅವರನ್ನು ಇತ್ತೀಚೆಗೆ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
Bhaskar Rao : Bhaskar Rao left Aam Aadmi and join BJP