ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೆಂಬಂತೆ ಕಾಣುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸದ್ದಿಲ್ಲದೆ ರಹಸ್ಯ ಆಟ ಆರಂಭಿಸಿದ್ದಾರೆ. ತಮ್ಮ ಅತ್ಯಾಪ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ಸದ್ದಿಲ್ಲದೇ ಬೆಂಗಳೂರಿಗೆ ಕಳಿಸಿ ವರದಿ ತರಿಸಿಕೊಂಡಿರುವುದು ರಾಜ್ಯ ಬಿಜೆಪಿ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿ ಕೇಶವಕೃಪಾಕ್ಕೆ ಭೇಟಿ ನೀಡಿದ್ದ ಭೂಪೇಂದ್ರ ಯಾದವ್,ಸಂಘದ ಹಿರಿಯ ನಾಯಕರ ಜೊತೆಗೆ ರಾಜ್ಯದ ರಾಜಕೀಯ ಬೆಳವಣಿಗೆ ಹಾಗೂ ಸರ್ಕಾರದ ಆಡಳಿತ ವೈಖರಿ, ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಅದರಲ್ಲೂ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ಹಿನ್ನೆಲೆಯಲ್ಲಿ ಭೂಪೇಂದ್ರ ಯಾದವ್ ರಹಸ್ಯ ಭೇಟಿ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆದಷ್ಟು ಶೀಘ್ರ ಸಿಎಂ ಗಾದಿಯಿಂದ ಕೆಳಗಿಳಿಸಲಾಗುತ್ತಿದೆ ಎಂಬ ಬಿಜೆಪಿ ವಲಯದಲ್ಲಿ ಬೀಸುತ್ತಿರುವ ಗಾಳಿ ಸುದ್ದಿಗೆ ಈ ಬೆಳವಣಿಗೆ ಪುಷ್ಠಿ ನೀಡಿದಂತಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಹಾಗೂ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರ ಹುಡುಕಾಟದಲ್ಲಿರುವ ಹೈಕಮಾಂಡ್, ಮುಖ್ಯಮಂತ್ರಿ ಬದಲಾವಣೆಯ ಮೊದಲ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ ಎಂದು ಉನ್ನತ ಮೂಗಳೂ ಹೇಳುತ್ತಿವೆ.
ನಾಯಕತ್ವ ಬದಲಾವಣೆ ಮಾಡಿದರೆ ಎದುರಾಗಬಹುದಾದ ಸಮಸ್ಯೆಗಳು, ಯಾರನ್ನು ಮುಂದಿನ ನಾಯಕರಾಗಿ ಆಯ್ಕೆ ಮಾಡಿದರೆ ಸೂಕ್ತ, ಸದ್ಯದ ರಾಜಕೀಯ ಸ್ಥಿತಿಗತಿಗಳು, ಪರಿಸ್ಥಿಗಳ ಗ್ರೌಂಡ್ ರಿಪೋರ್ಟನ್ನು ಅಮಿತ್ ಶಾ ಪಡೆದಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಗೊಂದಲ, ಇದರಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ, ನಾಯಕತ್ವ ಬದಲಾವಣೆ ಕುರಿತು ಪದೇ ಪದೇ ಕೇಳಿಬರುತ್ತಿರುವ ವದಂತಿಗಳ ಹಿನ್ನಲೆಯಲ್ಲಿ ಆರ್ಎಸ್ಎಸ್ ನಾಯಕರ ಜೊತೆ ಮಾತುಕತೆ ನಡೆಸಿ ಭೂಪೇಂದ್ರ ಯಾದವ್ ಅಭಿಪ್ರಾಯ ಸಂಗ್ರಹ ಮಾಡಿ ಹೈಕಮಾಂಡ್ಗೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಸಾಮಾನ್ಯವಾಗಿ ರಾಷ್ಟ್ರೀಯ ನಾಯಕರು ಯಾರೇ ರಾಜ್ಯಕ್ಕೆ ಆಗಮಿಸಿದರೂ ರಾಜ್ಯ ಬಿಜೆಪಿ ಕಚೇರಿಯಿಂದ ಮಾಹಿತಿ ನೀಡಲಾಗುತ್ತದೆ. ಆದರೆ ಈ ಬಾರಿ ಬಿಜೆಪಿ ಕಚೇರಿಗೂ ಮಾಹಿತಿ ನೀಡದೆ ಭೂಪೇಂದ್ರ ಯಾದವ್ ಬೆಂಗಳೂರಿಗೆ ಬಂದಿದ್ದಾರೆ.
ಬೆಂಗಳೂರಿಗೆ ಬಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ಆರ್ಎಸ್ಎಸ್ ಕಚೇರಿ ಹುಡುಕಲು ಹರಸಾಹಸ ನಡೆಸಿದ್ದಾರೆ. ಚಾಮರಾಜ ಪೇಟೆಗೆ ಹೋಗಿ ಆರ್.ಎಸ್.ಎಸ್ ಕಚೇರಿ ಕೇಶವಕೃಪಾಕ್ಕಾಗಿ ಹುಡುಕಾಡಿದ್ದಾರೆ. ಕೇಶವಾಕೃಪಾ ಸಮೀಪವೇ ಹೋಗಿದ್ದರೂ ಭೂಪೇಂದ್ರ ಯಾದವ್ಗೆ ಗೊತ್ತಾಗಲೇ ಇಲ್ಲವಂತೆ. ಕೊನೆಗೆ ಬಳಿಕ ಸ್ಥಳೀಯರನ್ನ ಕೇಳಿ ಕೇಶವಕೃಪಾಗೆ ತೆರಳಿದರು ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







