ಅಮೆರಿಕ ಮೂಲದ ಟೆಕ್ ದಿಗ್ಗಜ ಒರಾಕಲ್ ಕಾರ್ಪೊರೇಷನ್ ಸಂಸ್ಥೆ ಮತ್ತೊಮ್ಮೆ ದೊಡ್ಡ ಸುದ್ದಿಗೆ ಕಾರಣವಾಗಿದೆ. ಇತ್ತೀಚೆಗಷ್ಟೇ 30,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇಆಫ್ ಮಾಡಿದ್ದ ಕಂಪನಿ, ಇದೀಗ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ ಹಾಗೂ ಎನ್‌ಐಟಿ ವಿದ್ಯಾರ್ಥಿಗಳಿಗೆ ನೀಡಿದ್ದ ಉದ್ಯೋಗ ಆಫರ್‌ಗಳನ್ನು ಹಿಂಪಡೆದಿರುವುದಾಗಿ ವರದಿಯಾಗಿದೆ.
ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಫುಲ್-ಟೈಮ್ ಉದ್ಯೋಗಕ್ಕೆ ಆಯ್ಕೆಯಾಗಿದ್ದ ಹಲವಾರು ವಿದ್ಯಾರ್ಥಿಗಳಿಗೆ ಕೊನೆಯ ಕ್ಷಣದಲ್ಲಿ ಆಫರ್ ರದ್ದುಗೊಳಿಸಿರುವುದು ದೊಡ್ಡ ಆಘಾತ ಉಂಟುಮಾಡಿದೆ. ವರದಿಗಳ ಪ್ರಕಾರ, ಸುಮಾರು 50ಕ್ಕೂ ಹೆಚ್ಚು ಐಐಟಿ ವಿದ್ಯಾರ್ಥಿಗಳು ಹಾಗೂ ಅನೇಕ ಎನ್‌ಐಟಿ ವಿದ್ಯಾರ್ಥಿಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಇತರೆ ಕಂಪನಿಗಳ ಅವಕಾಶಗಳನ್ನು ತಿರಸ್ಕರಿಸಿ ಒರಾಕಲ್ ಆಫರ್‌ನ್ನೇ ಅಂತಿಮಗೊಳಿಸಿದ್ದರು. ಆದರೆ ಈಗ ಆಫರ್ ವಾಪಸ್ ಪಡೆಯಲಾಗಿರುವುದರಿಂದ ಅವರ ಭವಿಷ್ಯದ ಬಗ್ಗೆ ಆತಂಕ ಹೆಚ್ಚಾಗಿದೆ.
ಐಟಿ ಕ್ಷೇತ್ರದಲ್ಲಿ ಜಾಗತಿಕ ಆರ್ಥಿಕ ಅನಿಶ್ಚಿತತೆ, ವೆಚ್ಚ ಕಡಿತ ನೀತಿ ಹಾಗೂ AI ಆಧಾರಿತ ಆಟೋಮೇಶನ್ ಹೆಚ್ಚಳದ ಪರಿಣಾಮ ಅನೇಕ ಕಂಪನಿಗಳು ನೇಮಕಾತಿ ಕಡಿತ ಕ್ರಮ ಕೈಗೊಳ್ಳುತ್ತಿವೆ. ಒರಾಕಲ್ ಕೂಡ ಇದೇ ಹಾದಿಯಲ್ಲಿ ಸಾಗುತ್ತಿರುವುದಾಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬೆಳವಣಿಗೆ ದೇಶದ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದ್ದು, ಕ್ಯಾಂಪಸ್ ಆಫರ್‌ಗಳ ಮೇಲಿನ ವಿಶ್ವಾಸ ಕುಗ್ಗುತ್ತಿದೆ ಎಂಬ ಚರ್ಚೆ ಶಿಕ್ಷಣ ವಲಯದಲ್ಲಿ ಆರಂಭವಾಗಿದೆ. ಹಲವು ವಿದ್ಯಾರ್ಥಿಗಳು ಮತ್ತು ಪೋಷಕರು ಕಂಪನಿಗಳ ಇಂತಹ ನಿರ್ಧಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.







