ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಟೋಲ್ ಶುಲ್ಕ ಬಾಕಿ ಇರುವ ವಾಹನಗಳು ವಾಹನ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಮುಖ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಹೊಸ ನಿಯಮಗಳ ಪ್ರಕಾರ, ಟೋಲ್ ಬಾಕಿ ಇರುವ ವಾಹನಗಳಿಗೆ ಎನ್ಒಸಿ, ಫಿಟ್‌ನೆಸ್ ಪ್ರಮಾಣಪತ್ರ ನವೀಕರಣ, ರಾಷ್ಟ್ರೀಯ ಪರವಾನಗಿ (National Permit) ಇವುಗಳನ್ನು ಮಂಜೂರು ಮಾಡಲಾಗುವುದಿಲ್ಲ. ಟೋಲ್ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸಿದ ಬಳಿಕ ಮಾತ್ರ ಈ ಸೇವೆಗಳು ಲಭ್ಯವಾಗುತ್ತವೆ.
ಚಾಲಕರ ಆತಂಕ ಏನು?
ಅನೇಕ ಸಂದರ್ಭಗಳಲ್ಲಿ ವಾಹನ ಚಾಲಕರಿಗೆ ತಿಳಿಯದೇ ಟೋಲ್ ಬಾಕಿಯಾಗುವ ಸಾಧ್ಯತೆ ಇದೆ. ಉದಾಹರಣೆಗೆ:
ಟೋಲ್ ಪ್ಲಾಜಾದಲ್ಲಿ ತಾಂತ್ರಿಕ ದೋಷ
FASTag ಸ್ಕ್ಯಾನರ್ ಕೆಲಸ ಮಾಡದೇ ಹಣ ಕಡಿತವಾಗದಿರುವುದು
ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಪಾವತಿ ಪೆಂಡಿಂಗ್ ಆಗಿ ತೋರಿಸುವುದು
ಇಂತಹ ಸಂದರ್ಭಗಳಲ್ಲಿ ಚಾಲಕರು ಟೋಲ್ ಪಾವತಿಸಿದೆ ಎಂದು ಭಾವಿಸುತ್ತಾರೆ. ಆದರೆ ದಾಖಲೆಗಳಲ್ಲಿ ಅದು ಔಟ್ ಸ್ಟಾಡಿಂಗ್ ಡ್ಯೂ ಆಗಿ ಉಳಿಯಬಹುದು.
ಪರಿಹಾರವೇನು?
ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರಗಳ ಸೂಚನೆಯಂತೆ ವಾಹನ ಮಾಲೀಕರು,
ನಿಯಮಿತವಾಗಿ FASTag ಸ್ಟೇಟಸ್ ಪರಿಶೀಲಿಸಬೇಕು
ಬ್ಯಾಂಕ್ / FASTag ಆ್ಯಪ್‌ನಲ್ಲಿ ಪೆಂಡಿಂಗ್ ಪಾವತಿಗಳಿದ್ದರೆ ತಕ್ಷಣ ಕ್ಲಿಯರ್ ಮಾಡಬೇಕು
ತಪ್ಪಾಗಿ ಬಾಕಿ ತೋರಿಸಿದರೆ ಟೋಲ್ ಹೆಲ್ಪ್‌ಲೈನ್ ಅಥವಾ ಬ್ಯಾಂಕ್‌ಗೆ ದೂರು ಸಲ್ಲಿಸಬೇಕು
ಈ ಹೊಸ ನಿಯಮದ ಉದ್ದೇಶ ಟೋಲ್ ವಸೂಲಾತಿಯನ್ನು ಪಾರದರ್ಶಕವಾಗಿಸುವುದು ಮತ್ತು ಸರ್ಕಾರಿ ಆದಾಯ ನಷ್ಟ ತಡೆಯುವುದು ಎನ್ನಲಾಗಿದೆ. ಆದರೆ, ತಾಂತ್ರಿಕ ದೋಷಗಳಿಂದ ಸಾಮಾನ್ಯ ವಾಹನ ಚಾಲಕರು ಸಮಸ್ಯೆ ಎದುರಿಸದಂತೆ ಸ್ಪಷ್ಟ ಮಾರ್ಗಸೂಚಿ ನೀಡಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ.








