ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಲ್ಯಾಪ್ ಟಾಪ್ ನೀಡುವುದಿಲ್ಲ ಎನ್ನುವ ಮೂಲಕ ಸರ್ಕಾರ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. 2019-20ನೇ ಸಾಲಿನ ಎಲ್ಲ ಪದವಿ ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್ ನೀಡಲಾಗುತ್ತಿದೆ. ಆದರೆ ಈ ಯೋಜನೆಯನ್ನು ಮುಂದಿನ ವರ್ಷದಿಂದ ಕೈಬಿಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳೀದರು.
ಕಲಾಪ ನಡೆಯವು ವೇಳೆಯಲ್ಲಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಜಾರಿ ಮಾಡಲಾಗಿತ್ತು. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಯನ್ನು ಮುಂದುವರೆಸಿದ್ದರು. ಆದರೆ ಈ ಯೋಜನೆ ಆರ್ಥಿಕವಾಗಿ ದುಬಾರಿಯಾಗಿದೆ. ಒಟ್ಟು 1.9 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಲಾಗುತ್ತಿದೆ. ಯೋಜನೆ ಜಾರಿ ಮಾಡಬೇಕಾದರೆ 311 ಕೋಟಿ ರೂ. ವೆಚ್ಚವಾಗುತ್ತದೆ. ರಾಜ್ಯದಲ್ಲಿರುವ 400ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂಲಸೌಲಭ್ಯಗಳಿಲ್ಲ. ನ್ಯಾಕ್ ಸಮಿತಿ ಸರ್ಕಾರಿ ಕಾಲೇಜುಗಳಿಗೆ ಮಾನ್ಯತೆ ನೀಡಿಲ್ಲ. ಆದ್ದರಿಂದ 311 ಕೋಟಿ ಖರ್ಚು ಮಾಡಿ ಲ್ಯಾಪ್ ಟಾಪ್ ನೀಡುವ ಬದಲು, ಸರ್ಕಾರಿ ಕಾಲೇಜುಗಳ ಮೂಲಸೌಲಭ್ಯ ಹೆಚ್ಚಳಕ್ಕೆ ಆದ್ಯತೆ ನೀಡಬೇಕಾಗಿದೆ. ಹಿಂದಿನ ಸರ್ಕಾರ ನಿರ್ಧಾರದಂತೆ 2019-20ನೇ ಸಾಲಿಗೆ ಲ್ಯಾಪ್‍ಟಾಪ್ ಕೊಡಲಾಗುವುದು. ಟ್ಯಾಪ್ ಸಮಿತಿ ಮತ್ತು ಹಣಕಾಸು ಇಲಾಖೆಯ ನಿರ್ಧಾರದಂತೆ ಟೆಂಡರ್ ಕರೆದು ಗುತ್ತಿಗೆ ಕೂಡ ನೀಡಲಾಗಿದೆ. ಹಾಗಾಗಿ ಈ ಬಾರಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲರಿಗೂ ಲ್ಯಾಪ್‍ಟಾಪ್ ಕೊಡುತ್ತೇವೆ. ಮುಂದಿನ ವರ್ಷ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದರು.