ಬೆಳಗಾವಿ: ಇನ್ನೂ ಎರಡು-ಮೂರು ತಿಂಗಳು ಸುರೇಶ್ ಅಂಗಡಿ ಬದುಕಿದ್ರೆ ಅವರಿಗೆ ದೊಡ್ಡ ಭವಿಷ್ಯ ಇತ್ತು. ವಿಶೇಷ ಹುದ್ದೆ ಸಿಗುತ್ತಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಮತ್ತೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿದೆ.
ಗೋಕಾಕ್ನಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಕೊರೊನಾದಿಂದ ಕೊನೆಯುಸಿರೆಳದರು. ಅವರು ಇನ್ನಷ್ಟು ದಿನ ಬದುಕಬೇಕಿತ್ತು. ಆದರೆ ದುರ್ದೈವ ನಮ್ಮನ್ನಗಲಿದರು. ಬದುಕಿದ್ರೆ ದೊಡ್ಡ ಹುದ್ದೆ ಸಿಗುತ್ತಿತ್ತು ಎನ್ನುವ ಮೂಲಕ ಸುರೇಶ್ ಅಂಗಡಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದರು ಎಂಬ ಗುಟ್ಟನ್ನು ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರೈಸಿದ ನಂತರ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ ನಾಯಕತ್ವ ಬದಲಾವಣೆಗೆ ಕಳೆದ ಒಂದು ವರ್ಷದಿಂದ ಬಿಜೆಪಿಯ ಹೈಕಮಾಂಡ್ ನಾಯಕರು ತೆರೆಮರೆಯ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಯಡಿಯೂರಪ್ಪ ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರಾಗಿದ್ದ ಸುರೇಶ್ ಅಂಗಡಿ ಅವರನ್ನು ತರಲು ಬಿಜೆಪಿ ಸದ್ದಿಲ್ಲದೆ ಪ್ರಯತ್ನ ನಡೆಸಿತ್ತು.
ಆದರೆ, ಕಳೆದ ತಿಂಗಳು ಸುರೇಶ್ ಅಂಗಡಿ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟ ನಂತರ ಅವರ ಸೊದರ ಮಾವ ಲಿಂಗರಾಜ್ ಪಾಟೀಲ್ ನೀಡಿದ್ದ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು.
ನನ್ನನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ದೆಹಲಿಯ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಈ ಸಂಬಂಧ ನಡೆದ ಸಭೆಯಲ್ಲಿ ನನಗೂ ಈ ವಿಷಯ ತಿಳಿಸಿದ್ದಾರೆ. ಆ ದಿನಗಳು ಬಹಳ ದೂರ ಇಲ್ಲ, ಕೆಲವೇ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂದು ಸುರೇಶ್ ಅಂಗಡಿ ನನ್ನೊಂದಿಗೆ ಹಂಚಿಕೊಂಡಿದ್ದರು ಎಂದು ಲಿಂಗರಾಜ್ ಪಾಟೀಲ್ ಹೇಳಿದ್ದರು.
ಲಿಂಗರಾಜ್ ಪಾಟೀಲ್ ಹೇಳಿಕೆಯನ್ನು ರಾಜ್ಯ ಬಿಜೆಪಿ ನಾಯಕರು ತಳ್ಳಿ ಹಾಕಿದ್ದರು. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ನಾಯಕತ್ವದ ಪ್ರಶ್ನೆಯೇ ಇಲ್ಲ ಎಂದು ಸಮರ್ಥನೆ ನೀಡುವ ಮೂಲಕ ವಿಚಾರದ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು.
ಜಾರಕಿಹೊಳಿ ನೀಡಿದ್ದು ಬಿಎಸ್ವೈಗೆ ಸುಳಿವೋ, ವಾರ್ನಿಂಗೋ..!
ಸುರೇಶ್ ಅಂಗಡಿ ಇನ್ನಷ್ಟು ದಿನ ಬದುಕಿದ್ರೆ ದೊಡ್ಡ ಹುದ್ದೆ ಸಿಗುತ್ತಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿವುದು ಪಕ್ಕಾ ಎನ್ನುವುದರ ಸುಳಿವೋ ಅಥವಾ ಯಡಿಯೂರಪ್ಪ ನಂತರ ನಾಯಕರೊಬ್ಬರನ್ನು ಬೆಳೆಸಲು ಬಿಜೆಪಿ ನಡೆಸುತ್ತಿರುವ ರಣತಂತ್ರದ ಭಾಗವೋ ಎಂಬುದು ಈಗ ರಹಸ್ಯವಾಗಿಯೇನೂ ಉಳಿದಿಲ್ಲ.
ದಿವಂಗತ ಸುರೇಶ್ ಅಂಗಡಿ ಅವರನ್ನು ಗುಣಗಾನ ಮಾಡುವ ಭರದಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡಿ ಸುರೇಶ್ ಅಂಗಡಿ ಅವರನ್ನು ಕೂರಿಸಲು ಬಿಜೆಪಿ ತಯಾರಿ ನಡೆಸಿತ್ತು ಎಂಬುದರ ಸುಳಿವನ್ನು ರಮೇಶ್ ಜಾರಕಿಹೊಳಿ ನೀಡಿರುವ ಸಾಧ್ಯತೆ ಇದೆ. ಹೀಗಾಗಿ, ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel