53 ಲಕ್ಷ ರೂ ಬಹುಮಾನ ಪಡೆದ ಮಂಜು ಹೇಳಿದ್ದೇನು..?
ಬೆಂಗಳೂರು : ಮಂಜು ಪಾವಗಡ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಪಂಚಿಂಗ್ ಡೈಲಾಗ್ ಗಳ ಮೂಲಕ ಮನೆ ಮಂದಿಯನ್ನು ಮತ್ತು ನೋಡುವರನ್ನು ರಂಜಿಸುತ್ತಾ, ಕನ್ನಡಿಗರಿಗೆ ಹತ್ತಿರವಾಗಿದ್ದ ಮಂಜುಗೆ ಬಿಗ್ ಬಾಸ್ ಸೀಸನ್ 8 ರ ಕಿರೀಟ ದೊರಕಿದೆ. ಬಿಸ್ ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ನೀಡಲಾಗಿದ್ದು, ಇಷ್ಟೊಂದು ಮೊತ್ತವನ್ನು ನಾನು ನನ್ನ ಜೀವನದಲ್ಲಿಯೇ ನೋಡಿಲ್ಲ ಎಂದು ಮಂಜು ಹೇಳಿದ್ದಾರೆ.
ಬಿಗ್ ಬಾಸ್ ವಿನ್ನರ್ ಟ್ರೋಫಿಯನ್ನು ಗೆದ್ದ ಬಳಿಕ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ಫಿನಾಲೆಯಲ್ಲಿ ಸಿಗುವ ದೊಡ್ಡ ಮೊತ್ತದ ಹಣವನ್ನು ಇದುರೆಗೂ ಎಲ್ಲೂ ನೋಡಿಲ್ಲ, ಕೇಳಿದ್ದೀನಿ ಅಷ್ಟೇ. ಸದ್ಯ ಈ ಹಣವನ್ನು ಏನು ಮಾಡಬೇಕು ಎಂದು ಗೊತ್ತಿಲ್ಲ. ಆದರೆ ಅಪ್ಪ-ಅಮ್ಮನನ್ನು ನಾನು ಸಾಯೋವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮಹದಾಸೆ ಇದೆ. ಅವರಿಗಿಂತ ಮುಖ್ಯ ಯಾರೂ ಇಲ್ಲ. ಯಾಕಂದ್ರೆ ಅವರು ತುಂಬಾನೆ ಕಷ್ಟಪಟ್ಟು ಸಾಕಿ ಬೆಳೆಸಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ದೊಡ್ಡ ಆಸೆ ಎಂದು ತಿಳಿಸಿದರು.
ಇದೇ ವೇಳೆ ಬಿಗ್ ಬಾಸ್ ಬಗ್ಗೆ ಮಾತನಾಡಿ, ಆಸೆಗಳು ಎಲ್ಲರಿಗೂ ಇದ್ದೇ ಇರುತ್ತದೆ. ಕನ್ನಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಅನ್ನೋದು ಅತ್ಯಂತ ದೊಡ್ಡ ಶೋ ಆಗಿದೆ. ಇಂತಹ ವೇದಿಕೆಯಲ್ಲಿ ನನಗೆ ಅವಕಾಶ ಸಿಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದು ಮಂಜು ಪಾವಗಡ ಖುಷಿಪಟ್ಟರು.