ಬಿಗ್ ಬಾಸ್ ಕನ್ನಡ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿದೆ. ಸುದೀರ್ಘ ನಿರೀಕ್ಷೆಯ ಬಳಿಕ, ಬಹುಚರ್ಚಿತ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ಗೆ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ನಿರೂಪಣೆಗೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಿರ್ಮಾಪಕರು ಮತ್ತು ಚಾನೆಲ್ ಅಧಿಕೃತವಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಈ ಹಿಂದೆ 12ನೇ ಆವೃತ್ತಿಯಲ್ಲಿ ಭಾಗವಹಿಸುವುದಿಲ್ಲ ಎಂಬ ನಿರ್ಧಾರವನ್ನು ಸುದೀಪ್ ಘೋಷಿಸಿದಾಗ, ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರು ನಿರಾಸೆಗೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಇಲ್ಲದ ಬಿಗ್ ಬಾಸ್ ಬೇಡ ಎಂಬಂತೆ ಅಭಿಪ್ರಾಯ ವ್ಯಕ್ತವಾಗಿತ್ತು.
ಆದರೆ ಇದೀಗ ಸುದೀಪ್ ಅವರ ನಿರ್ಧಾರ ಬದಲಾಗಿದೆ. ಅವರು ಶೋ ನಿರೂಪಣೆಗೆ ಸಹಮತ ನೀಡಿದ್ದಾರೆ ಎನ್ನುವುದು ಶೋ ನಿರ್ಮಾಪಕರ ಅಧಿಕೃತ ಮಾಹಿತಿ. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ತಯಾರಿ ನಡೆಯುತ್ತಿದೆ, ಶೀಘ್ರದಲ್ಲೇ ಶೋ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಶೋ ಆರಂಭವಾದಾಗಿನಿಂದಲೇ ಸುದೀಪ್ ನಿರೂಪಕರಾಗಿದ್ದು, ಶೋಗೆ ವಿಶೇಷ ಮೆರುಗು ನೀಡಿದವರು.








