ಬಹುಶಃ ಬಿಜೆಪಿಯೂ ನಿರೀಕ್ಷೆ ಮಾಡಿರಲಿಲ್ಲ.. ಜೆಡಿಯು (JDU) ಕೂಡ ಭರವಸೆಯನ್ನು ಹೊಂದಿರಲಿಲ್ಲ. ಬಿಹಾರದ (Bihar) ಮತದಾರರು ಈ ರೀತಿಯ ಬೆಂಬಲ ನೀಡ್ತಾರೆ ಅಂತ ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ.
ಜನರ ಜೊತೆ ಫೋಟೋಗೆ ಪೋಸ್ ಕೊಟ್ರೆ ಮತ ಗಳಿಸೋಕೆ ಆಗಲ್ಲ. ವಂಶ ಪರಂಪರೆಯ ನಾಯಕತ್ವಕ್ಕೆ ಬಿಹಾರಿಗಳು ಜೈಕಾರ ಹಾಕಲಿಲ್ಲ. ಮಕ್ಕಳಾಟದ ರಾಜಕೀಯದ ಮೇಲೆ ನಂಬಿಕೆಯನ್ನಿಡಲಿಲ್ಲ. ವೈಯಕ್ತಿಕ ಟೀಕೆಗಳನ್ನು ಮತದಾರರು ಸಹಿಸಿಕೊಳ್ಳುವುದಿಲ್ಲ. ಯಾರನ್ನು ಆಯ್ಕೆ ಮಾಡಿದ್ರೆ ತನಗೆ ಎಷ್ಟು ಲಾಭ ಆಗುತ್ತೆ ಅನ್ನೋ ಪರಿಜ್ಞಾನವನ್ನು ಜನ ಅರಿತುಕೊಂಡಿದ್ದಾರೆ ಎಂಬುದು ಸುಳ್ಳಲ್ಲ. ಅದು ಆಶ್ವಾಸನೆಗಳಿರಲಿ.. ಭರವಸೆಗಳಿರಲಿ..ಮಾತೂ ಆಗಿರಲಿ…ಗ್ಯಾರಂಟಿಗಳು ಆಗಿರಲಿ.. ಯಾರನ್ನು ನಂಬಬೇಕು.. ಯಾರು ನಮಗೆ ಹಿತವರು.. ಯಾರಿಂದ ನಮಗೆ ಹೆಚ್ಚು ಅನುಕೂಲವಾಗುತ್ತೆ ಎಂಬುದನ್ನು ತಿಳಿದುಕೊಂಡು ಬಿಹಾರದ ಜನತೆ ಮತ ಹಾಕಿದ್ದಾರೆ ಅಂದ್ರೆ ಅದರಲ್ಲಿ ಅಚ್ಚರಿಪಡುವಂತಹುದೇನೂ ಇಲ್ಲ.
ಯಾಕಂದ್ರೆ ಬಿಹಾರಿಗಳಿಗೆ ಡಬಲ್ ಇಂಜಿನ್ ಸರ್ಕಾರದ ಮೇಲೆ ನಂಬಿಕೆ ಇತ್ತು. ಪ್ರಧಾನಿ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಆಡಳಿತ ವೈಖರಿಯ ಜುಗುಲ್‍ಬಂದಿಗೆ ಜನ ಮಾರು ಹೋಗಿದ್ದರು. ಜಂಗಲ್ ರಾಜ್ಯ ಎಂಬ ಕುಖ್ಯಾತಿ ಪಡೆದಿದ್ದ ಬಿಹಾರಕ್ಕೆ ಹೊಸ ಸ್ವರೂಪವನ್ನು ತಂದುಕೊಟ್ಟಿದ್ದು ನಿತೀಶ್ ಕುಮಾರ್ ಆಡಳಿತ ಎಂಬುದನ್ನು ಅಲ್ಲಿನ ಜನ ಮರೆಯಲಿಲ್ಲ. ಶಿಕ್ಷಣ, ರಸ್ತೆ, ವಿದ್ಯುತ್, ಆರೋಗ್ಯ, ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಜನ ಮರೆಯಲಿಲ್ಲ. ವಂಶವೃಕ್ಷದ ರಾಜಕೀಯದಿಂದ ದೂರವೇ ಉಳಿದಿರುವ ನಿತೀಶ್ – ಮೋದಿ ಎಂಬ ಜೊಡೆತ್ತುಗಳನ್ನು ನಂಬಿಕೊಂಡು ಉಳುಮೆ ಮಾಡಿರುವ ಭೂಮಿಯಲ್ಲಿ ಫಸಲು ಕಾಣುವುದನ್ನು ಬಿಹಾರದ ಜನ ಎದುರು ನೊಡುತ್ತಿದ್ದಾರೆ. ಬಿಹಾರಿಗಳ ನಂಬಿಕೆ – ವಿಶ್ವಾಸವನ್ನು ಮುಂದಿನ ಐದು ವರ್ಷಗಳ ಕಾಲ ಯಾವ ರೀತಿ ಉಳಿಸಿಕೊಳ್ಳುತ್ತದೆ ಅನ್ನೋದೇ ಎನ್‍ಡಿಎ ಸರ್ಕಾರಕ್ಕಿರುವ ಬಹುದೊಡ್ಡ ಸವಾಲು. ಯಾಕಂದ್ರೆ ಎನ್‍ಡಿಎ ಮೈತ್ರಿ ಕೂಟವನ್ನು ನಂಬಿಕೊಂಡು ಅಭೂತಪೂರ್ವ ಜನ ಬೆಂಬಲವನ್ನು ನೀಡಿರುವುದನ್ನು ನೋಡಿದಾಗ ಬಿಹಾರದ ಜನ ಮೋದಿ – ನಿತೀಶ್ ಅವರನ್ನು ಎಷ್ಟು ನೆಚ್ಚಿಕೊಂಡಿದ್ದಾರೆ ಎಂಬುದು ಕೂಡ ಅರ್ಥವಾಗುತ್ತದೆ.
ಅಂದ ಹಾಗೇ, ಎನ್‍ಡಿಎ ಮೈತ್ರಿ ಕೂಟ ಮತ್ತೆ ಅಧಿಕಾರಕ್ಕೆ ಬರುತ್ತೆ ಅನ್ನೋದು ಖಚಿತವಾಗಿತ್ತು. ಆದ್ರೆ ಇಷ್ಟೊಂದು ಬಹುಮತದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಅಂತ ಯಾರು ಕೂಡ ಊಹೆ ಮಾಡಿರಲಿಲ್ಲ. ಅದು ಸ್ವತಃ ಬಿಜೆಪಿ ಆಗಿರಲಿ, ಜೆಡಿಯೂನೇ ಆಗಿರಲಿ.. ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ.
ಹಾಗಿದ್ರೆ ಎನ್‍ಡಿಎ ಮೈತ್ರಿಕೂಟದ ಅಭೂತಪೂರ್ವ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯಾವುದು..? ಮಹಾ ಘಟಬಂಧನದ ಭಾರೀ ಹಿನ್ನಡೆಗೆ ಕಾರಣಗಳೇನು..? ಎನ್‍ಡಿಎ ಮೈತ್ರಿ ಕೂಟಕ್ಕೆ ಪ್ಲಸ್ ಆಗಿದ್ದೇನು..? ಎಂಜಿಬಿಗೆ ಮೈನಸ್ ಆಗಿದು ಹೇಗೆ..? ಈ ಪ್ರಶ್ನೆಗಳಿಗೆ ಸಿಂಪಲ್ ಆಗಿರುವ ಉತ್ತರಗಳು ನಂಬಿಕೆ ಮತ್ತು ಅಭಿವೃದ್ಧಿ. ಜೊತೆಗೆ ವಂಶೋದ್ಧಾರಕರು ಬೇಡ.. ಜನ ಸೇವೆ ಮಾಡೋ ನಿಜವಾದ ಜನನಾಯಕರು ಬೇಕು ಎಂಬುದÀನ್ನು ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಮತದಾರರು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ನಿತೀಶ್ ಯುಗಾಂತ್ಯ? ಏಕಾಂಗಿ ಸರ್ಕಾರ ರಚನೆಗೆ ಬಿಜೆಪಿ ರಣತಂತ್ರ!
ಹಾಗೇ ನೋಡಿದ್ರೆ, ಬಿಹಾರದಲ್ಲಿ ಲಾಲ್ ಪ್ರಸಾದ್ ಯಾದವ್ ಮಗ ತೇಜಸ್ವಿ ಯಾದವ್ ಅತ್ಯಂತ ಜನಪ್ರಿಯ ಯುವ ನಾಯಕ. ಇದರಲ್ಲಿ ಎರಡು ಮಾತಿಲ್ಲ. 36ರ ಹರೆಯದ ತೇಜಸ್ವಿ ಬಗ್ಗೆ ಬಿಹಾರಿಗಳು ಸಾಕಷ್ಟು ಭರವಸೆಯನ್ನಿಟ್ಟುಕೊಂಡಿದ್ದಾರೆ. ಆದ್ರೆ ತೇಜಸ್ವಿ ಜೊತೆ ಸೇರಿಕೊಂಡಿರುವ ಕೈ ನಾಯಕನನ್ನು ಮಾತ್ರ ಜನ ನಂಬುವ ಸ್ಥಿತಿಯಲಿಲ್ಲ. ಯಾಕಂದ್ರೆ ಎಂಜಿಬಿಗೆ ಬಹುಮತ ಬಂದ್ರೆ ತೇಜಸ್ವಿ ಯಾದವ್ ಸಿಎಂ ಆಗ್ತಾರೆ ಅನ್ನೋ ನಂಬಿಕೆ ಇರಲಿಲ್ಲ. ಯಾಕಂದ್ರೆ ಕಾಂಗ್ರೆಸ್ ಆರಂಭದಲ್ಲಿ ತೇಜಸ್ವಿ ಯಾದವ್ ಎಂಜಿಬಿಯ ಸಿಎಂ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಮಾಡಲು ಹಿಂದೇಟು ಹಾಕಿತ್ತು. ಕಡೆ ಗಳಿಗೆಯಲ್ಲಿ ತೇಜಸ್ವಿ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ರೂ ಆಗ ಸಮಯ ಮೀರಿ ಹೋಗಿತ್ತು. ಇನ್ನೊಂದೆಡೆ ಎಂಜಿಬಿ ನಾಯಕರು ರಾಜ್ಯದ ಅಭಿವೃದ್ಧಿಗಿಂತ ಹೆಚ್ಚಾಗಿ ಮೋದಿಯನ್ನು ಟೀಕೆ ಮಾಡೋದರಲ್ಲಿ ಮಗ್ನರಾಗಿದ್ದರು. ಮೋದಿಯನ್ನು ಟೀಕೆ ಮಾಡಿಕೊಂಡೇ ಪ್ರತಿಯೊಬ್ಬರ ಹೃದಯದಲ್ಲೂ ಮೋದಿ ಹೆಸರನ್ನು ಅಚ್ಚೊತ್ತಿದ್ದರು. ಹಾಗೇ ಎಂಜಿಬಿ ನಾಯಕರ ನಡುವೆ ಒಗ್ಗಟ್ಟಿನ ಕೊರತೆ ಕಾಡುತ್ತಿತ್ತು. ತೇಜಸ್ವಿ ಯಾದವ್ ರಾಜ್ಯಾದ್ಯಂತ ಸುತ್ತಾಡುತ್ತಿದ್ರೆ, ಇತ್ತ ಕೈ ನಾಯಕ ಮತಗಳ್ಳತನದ ಹಿಂದೆ ಬಿದ್ದಿದ್ದರು. ಹೀಗೆ ಒಗ್ಗಟ್ಟಿಲ್ಲದೆ ಮಕ್ಕಳಾಟ ಮಾಡ್ಕೊಂಡು ಚುನಾವಣೆ ಅಖಾಡಕ್ಕಿಳಿದಿದ್ದ ಮಹಾಘಟಬಂಧನಕ್ಕೆ ಬಿಹಾರದಲ್ಲಿ ಮುಖಭಂಗವಾಗಿದೆ.
ಇನ್ನು ಎನ್‍ಡಿಎ ಲೆಕ್ಕಾಚಾರ..ಅದು ಪಕ್ಕಾ ಪ್ಲ್ಯಾನ್. ಹೇಗೆ ಗೆಲ್ಲಬೇಕು ಎಂಬುದರ ಬಗ್ಗೆ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿಕೊಂಡೇ ಅಖಾಡಕ್ಕಿಳಿದಿದೆ. ಜಾತಿ ಲೆಕ್ಕಾಚಾರ ಮತ್ತು ಅಭಿವೃದ್ಧಿಗೆ ಪೂರಕವಾಗಿರುವ ಆಶ್ವಾಸನೆಗಳನ್ನು ಮುಂದಿಟ್ಟುಕೊಂಡೇ ಪ್ರಚಾರ ನಡೆಸಿತ್ತು.
ಮುಖ್ಯವಾಗಿ ಮಹಿಳಾ ಮತದಾರರನ್ನು ಸೆಳೆಯಲು ತಮ್ಮ ಖಾತೆಗೆ “ಲಕ್ಷ್ಮೀ” ಬರುತ್ತಾಳೆ ಅಂತ ಮನವರಿಕೆ ಮಾಡಿಸಿತ್ತು.
ಹಾಗೇ ಜಾತಿ ಲೆಕ್ಕಚಾರದ ಸಮೀಕರಣ. ದಲಿತ ಮತಗಳನ್ನು ಸೆಳೆಯಲು ಚಿರಾಗ್ ಪಾಸ್ವಾನ್ ಅವರನ್ನು ಎನ್‍ಡಿಎ ಮೈತ್ರಿಕೂಟದೊಳಗೆ ಸೇರಿಸಿಕೊಂಡಿತ್ತು. ಹಿಂದುಳಿದ ಮತಗಳನ್ನು ಸೆಳೆಯಲು ಜೆಡಿಯುನ ನಿತೀಶ್ ಕುಮಾರ್ ಫೋಟೋ ಸಾಕಾಗಿತ್ತು. ಇನ್ನೊಂದೆಡೆ ಮೇಲ್ಜಾತಿಯ ಮತಗಳನ್ನು ಪಡೆಯಲು ಬಿಜೆಪಿ – ಆರ್‍ಎಸ್‍ಎಸ್‍ನ ಐಡೆಂಟಿಟಿಯೇ ವರದಾನವಾಯ್ತು.
ಹಾಗೇ ಬಿಹಾರದಲ್ಲಿ ಯಾದವ ಮತ್ತು ಮುಸ್ಲೀಂ ಸಮುದಾಯದವರನ್ನು ಬಿಟ್ಟು ಉಳಿದೆಲ್ಲಾ ಸಮುದಾಯಗಳ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಎಂಜಿಬಿಗೆ ದೊಡ್ಡ ಮುಳುವಾಯ್ತು. ಮಹಾಘಟಬಂಧನ ಅಂದ್ರೆ ಕೇವಲ ಯಾದವರು ಮತ್ತು ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗಿದೆ ಎಂಬುದನ್ನು ಬಿಂಬಿಸಲು ಎನ್‍ಡಿಎ ಮೈತ್ರಿಕೂಟ ಯಶಸ್ವಿಯಾಯ್ತು. ಈ ನಡುವೆ, ನಿತೀಶ್ ಕುಮಾರ್ ಚಾರ್ಮ್ ಕೂಡ ಎನ್‍ಡಿಎಗೆ ಪ್ಲಸ್ ಆಗಿ ಪರಿಣಮಿಸಿತ್ತು. ಕುಟುಂಬ ರಾಜಕೀಯದಿಂದ ದೂರವೇ ಉಳಿದಿರುವ ನಿತೀಶ್ ಮೇಲೆ ಭ್ರಷ್ಟಚಾರದ ಕಲೆ ಇಲ್ಲ. ಮುಸ್ಲಿಂ ವಿರೋದಿ ಎಂಬ ಹಣೆಪಟ್ಟಿ ಇಲ್ಲ. ಪ್ರಚಾರದ ವೇಳೆ ತೀರಾ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೊಗುವ ನಾಯಕ ಎಂಬ ಚರಿಷ್ಮಾ ಅವರಲ್ಲಿದೆ. ಇದು ಎನ್‍ಡಿಎ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣೆಯಲ್ಲಿ ಒಳ್ಳೆ ಫಸಲು ಬರುವಂತೆ ಮಾಡಿತ್ತು.
ಆದ್ರೆ ಒಂದು ನೆನಪಿಡಿ.. ಎನ್‍ಡಿಎ ಮೈತ್ರಿಕೂಟದ ಭರ್ಜರಿ ಜಯ ಬಿಹಾರದಲ್ಲಿ ಕೇಸರಿ ಬಾವುಟ ರಾರಾಜಿಸುವಂತೆ ಮಾಡಿದೆ. ಅಲ್ಲದೆ ತಮ್ಮ ಧ್ವಜಸ್ತಂಭವನ್ನು ಗಟ್ಟಿಯನ್ನಾಗಿಸಿಕೊಂಡಿದೆ. ಅದು ಏನೇ ಇರಲಿ..ಬಿಹಾರದಲ್ಲಿ ನಿತೀಶ್ ಕುಮಾರ್ ಜಾದು ಮತ್ತು ಮೋದಿ ಅಲೆಗೆ ವಂಶ ವೃಕ್ಷವೇ ಅಲುಗಾಡಿದೆ. ಮಕ್ಕಳಾಟ ನಡೆಯಲ್ಲ ಎಂಬುದು ಈ ಬಾರಿಯೂ ಸಾಬೀತಾಗಿದೆ.
ಲೇಖನ: ಸನತ್ ರೈ








