ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 25ನೇ ವಯಸ್ಸಿನಲ್ಲಿ ಶಾಸಕಿಯಾಗಿರುವ ಮೈಥಿಲಿ ಠಾಕೂರ್, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಕಲಾತ್ಮಕ ಪ್ರತಿಭೆಯಿಂದಲೂ ಸದಾ ಗಮನ ಸೆಳೆಯುತ್ತಾರೆ. ಈ ಬಾರಿ ಕನ್ನಡ ಹಾಡು ಗಾಯನದ ಮೂಲಕ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
ಇತ್ತೀಚೆಗೆ ದೆಹಲಿಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪಾರ್ಥಗಲಿ ಜೀವೋತ್ತಮ್ ಮಠದ ವತಿಯಿಂದ ಆಯೋಜಿಸಲಾಗಿದ್ದ ‘ಭಜನಾ ಸಂಧ್ಯ’ ಕಾರ್ಯಕ್ರಮದಲ್ಲಿ ಮೈಥಿಲಿ ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಅವರು ಕನ್ನಡ, ಹಿಂದಿ, ಸಂಸ್ಕೃತ, ಭೋಜಪುರಿ ಸೇರಿದಂತೆ ಅನೇಕ ಭಾಷೆಗಳ ಭಜನೆಗಳು ಮತ್ತು ಭಕ್ತಿಗೀತೆಗಳನ್ನು ಬರೋಬ್ಬರಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಹಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಕನ್ನಡದಲ್ಲಿ ಹಾಡಿದ ಅವರ ಗಾಯನಕ್ಕೆ ಅಲ್ಲಿದ್ದ ಕನ್ನಡಿಗರು ಹಾಗೂ ಇತರರು ಭಾರೀ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಥಿಲಿ ಅವರ ಸ್ವಚ್ಛವಾದ ಉಚ್ಚಾರಣೆ, ಭಾವಪೂರ್ಣ ಹಾಡುಗಾರಿಕೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು.
ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಈ ಕಾರ್ಯಕ್ರಮದ ವಿಡಿಯೋಗಳು ಈಗ ವೈರಲ್ ಆಗುತ್ತಿದ್ದು, ಕನ್ನಡಿಗರಿಂದ ನಮ್ಮ ಭಾಷೆಗೆ ನೀಡಿದ ಗೌರವಕ್ಕೆ ಧನ್ಯವಾದಗಳು ಎಂಬ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.
ಮೈಥಿಲಿ ಕೂಡಾ ಕಾರ್ಯಕ್ರಮದ ನಂತರ ಮಾತನಾಡಿ, ಕನ್ನಡ ಭಾಷೆಯ ಸೊಗಡು ನನಗೆ ತುಂಬಾ ಇಷ್ಟ. ಮುಂದೆಯೂ ಇನ್ನಷ್ಟು ಕನ್ನಡ ಭಜನೆಗಳನ್ನು ಕಲಿತು ಹಾಡುವ ಆಸೆ ಇದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಮೈಥಿಲಿ ಮತ್ತೆ ತಮ್ಮ ಗಾಯನ ಕೌಶಲ್ಯ ಮತ್ತು ಸರಳತೆ ಮೂಲಕ ದೇಶದಾದ್ಯಂತ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.








