ಬಸ್ ಮತ್ತು ಬೈಕ್ ನಡುವೆ ಅಪಘಾತ – ಹೊತ್ತಿ ಉರಿದ ವಾಹನಗಳು…
ಮಂಗಳೂರು ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ಬೈಕ್ ಮತ್ತು ಬಸ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದ್ದು, ಅವಘಡದಲ್ಲಿ ಎರಡೂ ವಾಹನಗಳು ಬಾಗಶಃ ಸುಟ್ಟುಹೋಗಿವೆ.
ಅಶೆಲ್ ಎಂಬ ಖಾಸಗಿ ಸಿಟಿ ಬಸ್ ಜ್ಯೋತಿ ಕಡೆಯಿಂದ ಸ್ಟೇಟ್ ಬ್ಯಾಂಕ್ನತ್ತ ಹೊರಡುತ್ತಿತ್ತು. ಹಂಪನಕಟ್ಟೆ ಸಿಗ್ನಲ್ ದಾಟಿ ಮುಂದೆ ಚಲಿಸುತ್ತಿದ್ದಂತೆ ಬೈಕ್ ಸವಾರನೊಬ್ಬ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತವಾದ ತಕ್ಷಣ ಬೈಕ್ ಬಸ್ನ ಚಕ್ರದಡಿಗೆ ಸಿಲಿಕಿದೆ. ಬೈಕ್ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಬಸ್ನ ಡೀಸೆಲ್ ಟ್ಯಾಂಕ್ಗೆ ಕೂಡ ಬೆಂಕಿ ಹೊತ್ತಿಕೊಂಡು ಬಸ್ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಬಸ್ಗೆ ಬೆಂಕಿ ಹೊತ್ತಿದ ತಕ್ಷಣ ಅದರಲ್ಲಿದ್ದ ಪ್ರಯಾಣಿಕರು, ಚಾಲಕ, ನಿರ್ವಾಹಕರು ಕೆಳಗಿಳಿದು ಪಾರಾಗಿದ್ದಾರೆ. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಬೈಕ್ ಸವಾರ ಬಲ್ಲಾಳ್ ಬಾಗ್ನ ಡೈಲನ್ (26) ಎಂಬುವರ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








