ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚುತ್ತಿದ್ದವ ಅಂದರ್
ಧಾರವಾಡ : ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.
ತಡಸಿನಕೊಪ್ಪ ಗ್ರಾಮದ ಗೌಡ್ರ ಓಣಿಯ ಗೋವಿಂದ ಭೀಮಪ್ಪ ಬಂಗಾರಿ (25) ಬಂಧಿತ ಆರೋಪಿಯಾಗಿದ್ದಾನೆ.
ಈತ ಕಳೆದ 20 ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಪರಮೇಶ್ವರ ಎಂಬವರು ತಮ್ಮೂರಿಗೆ ಹೋಗಲು ನಿಂತಾಗ, ಬೈಕ್ ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ನಂಬಿಸಿದ್ದಾನೆ.
ಆ ಬಳಿಕ ಬೈಪಾಸ್ ಯರಿಕೊಪ್ಪ ಸೇತುವೆ ಬಳಿ ಕರೆದುಕೊಂಡು ಹೋಗಿ ಹೆದರಿಸಿ, ಹೊಡೆದು ಅವರಲ್ಲಿದ್ದ 5 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದ.
ಈ ಸಂಬಂಧ ಪರಮೇಶ್ವರ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ ಆತನಿಂದ 50 ಸಾವಿರ ಮೌಲ್ಯದ ಬೈಕ್, 3500 ರೂ. ನಗದು ವಶಪಡಿಸಿಕೊಂಡಿದ್ದಾರೆ.