ತುಮಕೂರಿನಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ
ತುಮಕೂರು: ಕಲ್ಪತರು ನಾಡು ತುಮಕೂರು ನಗರದಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗಿದೆ.
ಸದಾಶಿವನಗರ ರಿಂಗ್ ರಸ್ತೆಯಲ್ಲಿ ಹಾಡುಹಗಲೇ ಪುಂಡರು ಗಂಟೆಗಟ್ಟಲೆ ಬೈಕ್ ವ್ಹೀಲಿಂಗ್ ಮಾಡುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸರು ರಸ್ತೆ ಮೇಲೇ ಇದ್ದರೂ, ಅವರ ಕಣ್ಣು ತಪ್ಪಿಸಿ ಪುಂಡರು ವ್ಹೀಲಿಂಗ್ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ರಂಜಾನ್ ಹಬ್ಬದ ದಿನದಂದು ಸುಮಾರು ನಾಲ್ಕು ಬೈಕ್ಗಳಲ್ಲಿ ಬಂದ ಪುಂಡರು ಮರಳೂರು ಸರ್ಕಲ್ ನಿಂದ ಸದಾಶಿವನಗರದ ಎರಡನೇ ಹಂತದ ಸರ್ಕಲ್ ವರೆಗೂ ಸತತ ಅರ್ಧಗಂಟೆಗೂ ಹೆಚ್ಚು ಕಾಲ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಬೈಕ್ ವೀಲ್ಹಿಂಗ್ ದೃಶ್ಯಗಳನ್ನು ಸ್ಥಳಿಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೀಗೆ ಬೈಕ್ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ಭಯವನ್ನು ಉಂಟು ಮಾಡುತ್ತಿರುವ ಇಂತಹ ಪುಂಡರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಸಹ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಬೈಕ್ ವ್ಹೀಲಿಂಗ್ ಮಾಡಿರುವ ಪುಂಡರು ತಮ್ಮ ಬೈಕ್ ಗಳಲ್ಲಿರುವ ನಂಬರ್ ಪ್ಲೇಟ್ ಗಳನ್ನು ತೆಗೆದು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಇನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದಂತೆ ಅದನ್ನು ಗಮನಿಸಿದ ಪುಂಡರು ತಮ್ಮ ಮುಖಗಳನ್ನು ಮುಚ್ಚಿಕೊಂಡು ಪರಾರಿಯಾಗಿದ್ದಾರೆ.