ಬೆಂಗಳೂರು : ಕೊರೋನಾ ನಿರ್ವಹಣೆ ಹೆಸರಲ್ಲಿ 2200 ಕೋಟಿ ರೂ . ಲೂಟಿ ನಡೆದಿದ್ದು ಭಾರೀ ಪ್ರಮಾಣದ ಅಕ್ರಮಗಳು ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೊರೋನಾ ದಂತಹ ಸಂಕಷ್ಟ ಕಾಲದಲ್ಲೂ ಸರ್ಕಾರ ಸಾರ್ವಜನಿಕರ ಹಣದ ಲೂಟಿಗೆ ಇಳಿದಿದೆಯಲ್ಲದೇ ಮನುಷ್ಯತ್ವವನ್ನೇ ಮರೆತು ವರ್ತಿಸುತ್ತಿದೆ ಎಂದೂ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಕ್ರಮದ ವಿವಿಧ ಮುಖಗಳನ್ನು ತೆರೆದಿಟ್ಟ ಅವರು , ಆರೋಗ್ಯ ಇಲಾಖೆಯೊಂದರಲ್ಲೇ 3322 ಕೊಟಿ ರೂ. ಖರ್ಚಾಗಿದೆ. ಸ್ಯಾನಿಟೈಸರ್ ಖರೀದಿ ಸೇರಿದಂತೆ ಇಡೀ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸುವ ವಿಚಾರದಲ್ಲಿ ಕೋಟ್ಯಂತರ ರೂ. ಅಕ್ರಮಗಳು ನಡೆದಿವೆ. ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದೂ ಟೀಕಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ಸಚಿವರಾದ ಶ‍್ರೀರಾಮುಲು, ಆರ್.ಅಶೋಕ್, ಡಾ. ಸುಧಾಕರ್, ಮತ್ತು ಸುರೇಶ್ ಕುಮಾರ್ ನಡುವೆ ಸಮನ್ವಯವೇ ಇಲ್ಲ. ಇಡೀ ಆಡಳಿತ ವ್ಯವಸ್ಥೆ ದಿಕ್ಕೆಟ್ಟು ಹೋಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಪ್ರಾರಂಭದ ಹಂತದಲ್ಲಿ ಸರ್ಕಾರ ಸ್ಥಾಪಿಸಿದ್ದ ಪರಿಹಾರ ನಿಧಿಗೆ ಭಾರೀ ಪ್ರಮಾಣದ ಹಣ ದೇಣಿಗೆ, ಅನುದಾನದ ರೂಪದಲ್ಲಿ ಹರಿದು ಬಂದಿದೆ. ಆದರೆ ಅದನ್ನು ಸಮರ್ಪಕವಾಗಿ ವೆಚ್ಚ ಮಾಡಲಾಗಿಲ್ಲ 815 ಕೋಟಿ ರೂ . ಹಣ ಏನಾಯ್ತು ಎಂಬುದರ ಲೆಕ್ಕವೇ ಸಿಗುತ್ತಿಲ್ಲಅಕ್ರಮ ನಡೆದಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆ ಎಂದೂ ಆರೋಪಿಸಿದರು.
ಸರ್ಕಾರ ಕೊರೋನಾ ಪೀಡಿತರ ವಿಚಾರದಲ್ಲಿ ಎಷ್ಟು ಮಾನವೀಯತೆ ಮರೆತು ವರ್ತಿಸಿದೆ ಎಂದರೆ ಸೋಂಕಿನಿಂದ ಮೃತಪಟ್ಟ ರೋಗಿಗಳ ಶವ ಸಂಸ್ಕಾರವನ್ನೂ ಬೇಕಾ ಬಿಟ್ಟಿಯಾಗಿ ಅಮಾನವೀಯವಾಗಿ ಮಾಡಲಾಗಿದೆ. ಇಲ್ಲಿ ನಿಯಮಗಳೇ ಪಾಲನೆಯಾಗಿಲ್ಲ.
ಸೋಂಕಿತರು ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಹಾಸಿಗೆಗಳ ಕೊರತೆ ನೆಪ ಒಡ್ಡಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ. ಅಗತ್ಯ ಸಂಖ್ಯೆಯಲ್ಲಿ ಬೆಡ್‍ಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಾಗಿದ್ದ ಸಚಿವರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸರ್ಕಾರದ ಆಡಳಿತ ವ್ಯವಸ್ಥೆ ಎಷ್ಟು ಹಾಳಾಗಿದೆ ಎಂದರೆ ಶಾಸಕರಿಂದ ಐದು ಪರ್ಸೆಂಟ್ ಕಮಿಷನ್ ವಸೂಲಿ ಮಾಡುವ ಹಂತಕ್ಕೆ ಮುಟ್ಟಿದೆ. ಇದು ಲೂಟಿ ಅಲ್ಲದೇ ಮತ್ತೇನು? ಎಂದು ಪ್ರಶ್ನೆ ಮಾಡಿದ್ದಾರೆ.








