ನವದೆಹಲಿ : ಹೆಮ್ಮಾರಿ ಕೊರೊನಾಗೆ ಔಷಧ ಕಂಡು ಹಿಡಿಯಲು ದೇಶ ವಿದೇಶದಲ್ಲಿ ಸಂಶೋಧಕರು ನಿರಂತರ ಪ್ರಯತ್ನದಲ್ಲಿದ್ದಾರೆ. ಇದರ ಮಧ್ಯೆ ಬೆಂಗಳೂರಿನ ಬಯೋಕಾನ್ ಸಂಸ್ಥೆ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಕೋವಿಡ್ 19 ಸೋಂಕಿತರಿಗೆ ‘ಇಟೋಲಿಝುಮಾಬ್’ ಔಷಧವನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಕೋವಿಡ್ 19 ಸೋಂಕಿತರಿಗೆ ನೀಡಲು ಡಿಸಿಜಿಐ ಷರತ್ತು ಬದ್ಧ ಅನುಮತಿ ನೀಡಿದೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ), ಇಟೋಲಿಝಮಾಬ್ ಔಷಧವನ್ನು ತುರ್ತು ಸ್ಥಿತಿಯಲ್ಲಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬ ಷರತ್ತನ್ನು ವಿಧಿಸಿದೆ.
ಬಯೋಕಾನ್ ಕಂಪನಿ ಚರ್ಮರೋಗ ಸೋರಿಯಾಸಿಸ್ ಗೆ ಬಳಸುವ ಈ ಔಷಧವನ್ನು ಉಸಿರಾಟದ ತೊಂದರೆಗೆ ಬಳಸುವ ರೋಗಿಗಳಿಗೆ ನೀಡುವ ಸಂಬಂಧ 2ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿ, ತನ್ನ ಪ್ರಯೋಗದ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು. ಡಿಸಿಜಿಐ ಈ ವರದಿಯನ್ನು ಶ್ವಾಸಕೋಶ, ಔಷಧ ಶಾಸ್ತ್ರ, ಏಮ್ಸ್ ತಜ್ಞರ ಸಮಿತಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ತಜ್ಞರಿಂದ ಒಪ್ಪಿಗೆ ಸಿಕ್ಕಿದ ಬಳಿಕ ಕೊರೊನಾ ಸೋಂಕಿತರ ಸಮ್ಮತಿಯ ಮೇರೆಗೆ ಬಳಸಲು ಶುಕ್ರವಾರ ಅನುಮತಿ ನೀಡಿದೆ. ಅಂದಹಾಗೆ ಈ ಔಷಧಿಯನ್ನು ಮುಂಬೈ ಮತ್ತು ದೆಹಲಿಯಲ್ಲಿ ಪ್ರಯೋಗ ಮಾಡಲಾಗಿತ್ತು.