ಬಿಟ್ ಕಾಯನ್ ಪ್ರಕರಣ : ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ
ದಾವಣಗೆರೆ : ಬಿಟ್ ಕಾಯನ್ ಪ್ರಕರಣದ ಸುತ್ತ ಇದೀಗ ರಾಜ್ಯ ರಾಜಕಾರಣಗಳು ಸುತ್ತುತ್ತಿದ್ದಾರೆ. ಬಿಜೆಪಿ-ಕಾಂಗ್ರೆಸ್ ನಾಯಕರು ಬಿಟ್ ಕಾಯನ್ ಪ್ರಕರಣದ ವಿಚಾರವಾಗಿ ಪರಸ್ಪರ ವಾಗ್ಬಾಣಗಳನ್ನು ಬಿಡುತ್ತಿದ್ದಾರೆ.
ಇದರ ಮುಂದುವರೆದ ಭಾಗವಾಗಿ ಇದೀಗ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತನ್ನ ತಪ್ಪು ಮುಚ್ಚಿ ಹಾಕಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ ಎಂದು ದೂರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ತಮ್ಮ ತಪ್ಪು ಮುಚ್ಚಿಹಾಕಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆಯೇ ಹೊರತು ಬೇರೇನು ಅಲ್ಲ.
ಯಾರು ಭಾಗಿಯಾಗಿದ್ದಾರೆ, ಯಾರ ಮಕ್ಕಳು ಇದ್ದಾರೆ ಎನ್ನುವುದು ತನಿಖೆ ನಂತರ ಗೊತ್ತಾಗಲಿದೆ. ಇದನ್ನು ರಾಜಕೀಯವಾಗಿ ಇಟ್ಟುಕೊಂಡು ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾಜಿ ಸಚಿವ ಪ್ರಿಯಾಂಕ ಖರ್ಗೆಗೆ ಟಾಂಗ್ ನೀಡಿದ ಬಿವೈ ವಿಜಯೇಂದ್ರ, ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿದೆ. ಏನೇ ಆರೋಪಗಳು ಬಂದರೂ ಬಿಜೆಪಿ ಎದುರಿಸುತ್ತದೆ. ಯಾರೋ ಒಬ್ಬ ಕಾಂಗ್ರೆಸ್ ಮುಖಂಡ ತಲೆದಂಡ ಆಗುತ್ತೆ ಎಂದು ಹೇಳಿದ ಮಾತ್ರಕ್ಕೆ ಅದು ಸತ್ಯವಾಗುವುದಿಲ್ಲ ಎಂದಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಬಿಟ್ ಕಾಯನ್ ಹಗರಣ ಮುಖ್ಯಮಂತ್ರಿಗಳನ್ನು ಬಲಿ ಪಡೆದುಕೊಳ್ಳಲಿದೆ ಎಂದಿದ್ದರು.