ಬೆಂಗಳೂರು : ಮಂಗಳವಾರ ತಡರಾತ್ರಿ ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ನಾಯಕ ಬಿ.ಎಲ್. ಸಂತೋಷ್, “ದಲಿತ ಶಾಸಕನ ಮನೆಗೆ ಬೆಂಕಿ ಬಿದ್ದರೂ ಕಾಂಗ್ರೆಸ್ ನಾಯಕರು ಮೌನ ಸಾಧಿಸಿದ್ದಾರೆ” ಎಂದು ಕೆಣಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ ಎಂದು ಪ್ರಶ್ನಿಸಿದ್ದಾರೆ.
ಬಿ.ಎಲ್ ಸಂತೋಷ್ ಅವರಿಗೆ ಸರಣಿ ಟ್ವೀಟ್ ಗಳನ್ನು ಮಾಡಿ ಪ್ರಶ್ನಿಸಿರುವ ಸಿದ್ದರಾಮಯ್ಯ, ಬಿ.ಎಲ್. ಸಂತೋಸ್ ಅವರು ‘ಹಿಂದುತ್ವ’ದ ಜಪ ನಿಲ್ಲಿಸಿ ‘ದಲಿತ’ ಜಪ ಶುರು ಮಾಡಿದ್ದಾರೆ. ‘ಹಿಂದು-ಒಂದು’ ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ,ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ ಎಂದಿದ್ದಾರೆ.
.@blsanthosh ಅವರು 'ಹಿಂದುತ್ವ'ದ ಜಪ ನಿಲ್ಲಿಸಿ 'ದಲಿತ' ಜಪ ಶುರು ಮಾಡಿದ್ದಾರೆ.
'ಹಿಂದು-ಒಂದು' ಎಂದು ಭಜನೆ ಮಾಡ್ತೀರಿ,
ಜಾತಿ ಮೂಲದ ತಾರತಮ್ಯ,ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ.
ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ?
1/7#AntiDalithBJP pic.twitter.com/yYFmES37AP— Siddaramaiah (@siddaramaiah) August 13, 2020
“ರಾಜ್ಯದಲ್ಲಿ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ,
ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ? ಇದು ತಲೆತಗ್ಗಿಸುವಂತಹ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ ಬಿ.ಎಸ್ ಸಂತೋಷ್ ಅವರೇ?”
“ದಲಿತರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರನ್ನು ದೇಶ ಕಂಡಿದೆ. ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಗೋಮಾಂಸ ತಿಂದಿದ್ದಕ್ಕೆ, ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ಕುದುರೆ ಏರಿದ್ದಕ್ಕೆ,ಮೀಸೆ ಬಿಟ್ಟಿದ್ದಕ್ಕೆ…
ದಲಿತರ ಬೆನ್ನತ್ತಿ ಹಿಂಸಿಸಿ, ಸಾಯಿಸಿದ್ದು ಯಾರ ಆಡಳಿತದಲ್ಲಿ ಬಿ.ಎಲ್ ಸಂತೋಷ್ ಅವರೇ?”
“ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವವರು ಯಾವ ಪಕ್ಷದವರು ಬಿಎಲ್ ಸಂತೋಷ್ ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ?”
“ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್ಸಿ ಪಿ-ಟಿಎಸ್ಪಿ ಯೋಜನೆಗೆ ನೀಡಿದ್ದ ಹಣ ರೂ.22,161 ಕೋಟಿ ಮಾತ್ರ.
ನಮ್ಮ ಸರ್ಕಾರದ 5 ವರ್ಷಗಳಲ್ಲಿ ನೀಡಿದ್ದ ಹಣ ರೂ.88, 395 ಕೋಟಿ. ನರೇಂದ್ರ ಮೋದಿ ಅವರಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರ್ತೀರಾ ಬಿ.ಎಲ್ ಸಂತೋಷ್ ಅವರೇ?”
“ದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು
ಬಿ.ಎಲ್ ಸಂತೋಷ್ ಅವರೇ? ದಲಿತರು ಜಾಗೃತರಾಗಿದ್ದಾರೆ, ಹಿತೈಷಿಗಳು ಯಾರು? ಹಿತಶತ್ರುಗಳು ಯಾರು ಎನ್ನುವುದು ಅವರಿಗೆ ಗೊತ್ತಿದೆ.ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡ್ಬೇಡಿ.” ಎಂದು ಸಿದ್ದರಾಮಯ್ಯ ಟ್ವೀಟ್ ಗಳನ್ನು ಮಾಡಿದ್ದಾರೆ.








