ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಲೂಟಿ ಮಾಡುವಲ್ಲಿ ನಿರತ : ಹೆಚ್ ಡಿಕೆ
ಬೆಂಗಳೂರು : ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಹಣ ಲೂಟಿ ಮಾಡುವಲ್ಲಿ ನಿರತವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ಐದು ಲಕ್ಷ ರುಪಾಯಿ ಎಂಬ ಅಧಿಕಾರಿ ಹೇಳಿಕೆ ಆಡಿಯೋ ವೈರಲ್ ಆಗಿದೆ. ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ನೀರಾವರಿ ಇಲಾಖೆಯ 20,000 ಕೋಟಿ ಯೋಜನೆಯಲ್ಲಿ 10% ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಜೀವಂತವಾಗಿರುವಾಗಲೇ ಅಬಕಾರಿ ಇಲಾಖೆಯ ಅಕ್ರಮ ಬಯಲಾಗಿದೆ. ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ 5 ಲಕ್ಷ ಹೋಗಬೇಕು ಎಂಬ ಅಧಿಕಾರಿಗಳ ಸಂಭಾಷಣೆ ಬಹಿರಂಗವಾಗಿದೆ. ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಹಣ ಲೂಟಿ ಮಾಡುವಲ್ಲಿ ನಿರತವಾಗಿದೆ.
ಆಡಿಯೊ ಬಹಿರಂಗವಾಗುತ್ತಲೇ ಅಬಕಾರಿ ಇಲಾಖೆಯ ಮೂವರು ಇನ್ಸ್‍ಪೆಕ್ಟರ್‍ಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಟ್ಟಿರಬಹುದಾದವರಿಗೆ ಶಿಕ್ಷೆ ಕೊಟ್ಟ ಮೇಲೆ ಈಸ್ಕೋಂಡಿರಬಹುದಾದವರಿಗೆ ಶಿಕ್ಷೆ ಇಲ್ಲ ಏಕೆ? ಅಧಿಕಾರಿಗಳ ಮೇಲಿನ ಕ್ರಮ ಭ್ರಷ್ಟಾಚಾರಕ್ಕಾಗಿಯೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದರು ಎಂಬ ಕಾರಣಕ್ಕೋ ಎಂದು ಪ್ರಶ್ನಿಸಿದ್ದಾರೆ.
2 ಸಾವಿರ ಕೋಟಿ ಕಿಕ್ ಬ್ಯಾಕ್ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಈಗಾಗಲೇ ನಾನು ಆಗ್ರಹಿಸಿದ್ದೇನೆ. ಅದರಲ್ಲಿನ ಬಿ. ಎಸ್ ಯಡಿಯೂರಪ್ಪ ಕುಟುಂಬದ ಪಾತ್ರದ ಬಗ್ಗೆ ತನಿಖೆಯಾಗಲಿ ಎಂದು ಹೇಳಿದ್ದೇನೆ. ಅದರ ಜೊತೆಗೆ ಅಬಕಾರಿ ಇಲಾಖೆಯಲ್ಲಿನ ಈ ಪ್ರಕರಣದ ಬಗ್ಗೆಯೂ ತನಿಖೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಕೂಡಲೇ ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೇಕು.
ಜೊತೆಗೆ, ಕೋವಿಡ್ ಮತ್ತು ಬ್ಲಾಕ್ ಫಂಗಸ್ ಸ್ಥಿತಿಗತಿಗಳು, ಕೈಗೊಂಡ ಕ್ರಮಗಳು, ಕೊಟ್ಟ ಪರಿಹಾರ, ಅಕ್ರಮ ಆರೋಪಗಳ ಕುರಿತು ಚರ್ಚಿಸಲು ಅಧಿವೇಶನ ಕರೆಯಬೇಕೆಂದು ನಾನು ಆಗ್ರಹಿಸಿದ್ದೇನೆ. ಅದರ ಬಗ್ಗೆ ಸಿಎಂ ಈ ವರೆಗೆ ಮಾತನಾಡಿಲ್ಲ. ಪ್ರತಿಪಕ್ಷಗಳ ಮುಂದೆ ನಿಲ್ಲಲು ಅವರಿಗೆ ಭಯವಿದ್ದಂತೆ ಕಾಣುತ್ತಿದೆ. ಭಯವಿಲ್ಲದೇ ಹೋದರೆ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.









