ಪ್ರಶಸ್ತಿ ಘೋಷಿಸಿದ ದಿನವೇ ಸುಧೀಂದ್ರ ಹಾಲ್ದೊಡ್ಡೇರಿ ನಿಧನ : ಕಂಬನಿ ಮಿಡಿದ ಗಣ್ಯರು
ಬೆಂಗಳೂರು : ಇಂದು ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಆದ್ರೆ ಪ್ರಶಸ್ತಿ ಘೋಷಿಸಿದ ದಿನವೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇಹಲೋಕ ತ್ಯಜಿಸಿದ್ದಾರೆ.
ಅವರಿಗೆ ವಾರದ ಹಿಂದೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಇಂದು ಮಧ್ನಾಹ್ನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ವಿಜ್ಞಾನ ಬರಹಗಳ ಮೂಲಕ ಜನರ ಮೆಚ್ಚುಗೆ ಪಡೆದಿದ್ದರು. ಕನ್ನಡದ ಹಲವು ಪತ್ರಿಕೆಗೆ ಅಂಕಣವನ್ನೂ ಸಹ ಬರೆಯುತ್ತಿದ್ದರು.
ಇನ್ನು ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನಕ್ಕೆ ರಾಜ್ಯಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
ಖ್ಯಾತ ವಿಜ್ಞಾನ ಬರಹಗಾರರು,ಡಿಆರ್ ಡಿಒ ಮಾಜಿ ವಿಜ್ಞಾನಿ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನದ ಸುದ್ದಿ ಆಘಾತ ತಂದಿದೆ. ಎಷ್ಟೇ ಕ್ಲಿಷ್ಟ ವಿಜ್ಞಾನದ ಸಂಗತಿಗಳನ್ನು ಸರಳವಾಗಿ ಬರೆಯುವ ಕಲೆ ಅವರಿಗೆ ಕರಗತವಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ-ಹಿತೈಷಿವರ್ಗಕ್ಕೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಾರ್ಥಿಸಿದ್ದಾರೆ.
ಕನ್ನಡ, ವಿಜ್ಞಾನ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯವಾದದ್ದು, ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಅವರು ಜನಪ್ರಿಯರಾಗಿದ್ದರು. ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.ಇಂದು ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಪ್ರಶಸ್ತಿ ಘೋಷಿಸಿದ ದಿನವೇ ಹಾಲ್ದೊಡ್ಡೇರಿ ನಿಧನರಾದದ್ದು ತುಂಬಾ ದುರಾದೃಷ್ಟಕರ ಸಂಗತಿ. ಅಭಿನಂದನೆ ತಿಳಿಸಬೇಕಾದ ಸಂದರ್ಭದಲ್ಲಿ ಸಂತಾಪ ಸೂಚಿಸುತ್ತಿರುವುದು ಸಂಕಟ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಬೇಸರದ ನುಡಿಗಳನ್ನಾಡಿದ್ದಾರೆ.
ಇನ್ನು ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ 22 ವರ್ಷ ಸೇವೆ ಸಲ್ಲಿಸಿದ್ದ ಹಾಲ್ದೊಡ್ಡೇರಿ ನಂತರ ಸ್ವಯಂ ನಿವೃತ್ತಿ ಪಡೆದು ಜೈನ್ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬರೆಯುವ ಕಲೆ ಅವರಿಗೆ ಕರಗತವಾಗಿತ್ತು. ಅವರ ನಿಧನದಿಂದ ಕನ್ನಡ ಅಕ್ಷರ ಲೋಕ ಒಬ್ಬ ಅತ್ಯುತ್ತಮ ಲೇಖಕರನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಆ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.