1973ರಲ್ಲಿ ಹಿರಿಯ ರಾಜಕಾರಣಿ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೈಸೂರು ರಾಜ್ಯಕ್ಕೆ ಅಧಿಕೃತವಾಗಿ ಕರ್ನಾಟಕ ಎಂಬ ಹೆಸರನ್ನು ನೀಡಲಾಯಿತು. ಈ ಐತಿಹಾಸಿಕ ಘಟನೆಯಿಂದ ಈಗಾಗಲೇ 50 ವರ್ಷಗಳು ಕಳೆದಿದ್ದರೂ, ಈ ಮಹತ್ವದ ಸಂದರ್ಭವನ್ನು ಆಚರಿಸುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾದ ಜನರಾಜ್ಯೋತ್ಸವ–2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಎಂಬ ನಾಮಕರಣವು ನಮ್ಮ ರಾಜ್ಯದ ಹೆಮ್ಮೆ, ಕನ್ನಡಿಗರ ಆತ್ಮಗೌರವದ ಸಂಕೇತ. ಆದರೆ ಈ ಐತಿಹಾಸಿಕ ಘಟ್ಟಕ್ಕೆ ಸಂಬಂಧಿಸಿದ ಸುವರ್ಣ ಮಹೋತ್ಸವವನ್ನು ಬಿಜೆಪಿ ಸರ್ಕಾರ ಆಚರಿಸಲಿಲ್ಲ. ನಮ್ಮ ಸರ್ಕಾರ ಮಾತ್ರ ಈ ಸಂಭ್ರಮವನ್ನು ಇಡೀ ರಾಜ್ಯದಲ್ಲಿ ಜನರಿಗೆ ತಲುಪಿಸುವ ರೀತಿಯಲ್ಲಿ ಆಚರಣೆ ಮಾಡಿದೆ ಎಂದು ಹೇಳಿದ್ದಾರೆ.
ಕನ್ನಡವೇ ಕರ್ನಾಟಕದ ಸಾರ್ವಭೌಮ ಭಾಷೆ ಎಂದು ಪುನರುಚ್ಚರಿಸಿದ ಸಿಎಂ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಗೌರವಿಸುವ ನಿಟ್ಟಿನಲ್ಲಿ ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಇದು ಕನ್ನಡ ಮತ್ತು ಕರ್ನಾಟಕದ ಗೌರವವನ್ನು ಪ್ರತಿನಿಧಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ
ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸರ್ಕಾರ ಸದಾ ಬದ್ಧವಾಗಿದ್ದು, ಮುಂದಿನ ದಿನಗಳಲ್ಲೂ ಕನ್ನಡದ ಘನತೆ, ಪರಂಪರೆ ಹಾಗೂ ಇತಿಹಾಸವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.








