ಬೆಂಗಳೂರು: ರಾಜಧಾನಿಯ ಅಪಾರ್ಟ್‌ಮೆಂಟ್ ಫೆಡರೇಶನ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವೊಂದು ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ. ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೋರಿದ ವರ್ತನೆ ಮತ್ತು ಬಳಸಿದ ಪದಪ್ರಯೋಗಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡಿರುವ ಪ್ರತಿಪಕ್ಷ ಬಿಜೆಪಿ, ಡಿಕೆಶಿ ವಿರುದ್ಧ ಟೀಕಾಸ್ತ್ರಗಳ ಸುರಿಮಳೆಯನ್ನೇ ಗೈದಿದೆ.
ಪಾಳೆಗಾರಿಕೆ ಸಂಸ್ಕೃತಿ ಬಿಡಿ: ಬಿಜೆಪಿ ಗುಡುಗು
ಸಭೆಯಲ್ಲಿ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಸಿಟ್ಟಾಗಿ, “ನಾನ್ಯಾರು ಗೊತ್ತಾ?” ಎಂದು ಡಿಕೆಶಿ ಪ್ರಶ್ನಿಸಿದ ರೀತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಎಕ್ಸ್ ತಾಣದಲ್ಲಿ ವಿಸ್ತೃತ ಪೋಸ್ಟ್ ಮಾಡಿರುವ ಬಿಜೆಪಿ, “ಶಿವಕುಮಾರ್ ಅವರೇ, ನೀವು ಈಗ ರಾಜ್ಯದ ಜವಾಬ್ದಾರಿಯುತ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದೀರಿ. ಅಂದಿನ ದಿನಗಳ ಪಾತಕಿ ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂಬುದನ್ನು ದಯವಿಟ್ಟು ಮರೆತುಬಿಡಿ. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು, ಅವರ ಎದುರು ರೌಡಿಯಂತೆ ವರ್ತಿಸುವುದು ಶೋಭೆಯಲ್ಲ” ಎಂದು ಚಾಟಿ ಬೀಸಿದೆ.
ಜೈಲಿಗೆ ಹೋಗಿದ್ದು ಸಾಧನೆಯಲ್ಲ!
ತಮ್ಮ ಭಾಷಣದಲ್ಲಿ ಡಿಕೆಶಿಯವರು, “ನಾನು ಪ್ರಧಾನಿ ಹಾಗೂ ಗೃಹ ಸಚಿವರಿಗೇ ಹೆದರದೆ ಜೈಲಿಗೆ ಹೋಗಿ ಬಂದವನು” ಎಂದು ಹೇಳಿಕೊಂಡಿದ್ದನ್ನು ಬಿಜೆಪಿ ಲೇವಡಿ ಮಾಡಿದೆ. “ನೀವು ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟ ಮಾಡಿಯೋ ಅಥವಾ ಸಮಾಜ ಸೇವೆ ಮಾಡಿಯೋ ಅಲ್ಲ. ಭ್ರಷ್ಟಾಚಾರ ಮತ್ತು ಅವ್ಯವಹಾರದ ಗಂಭೀರ ಆರೋಪಗಳ ಅಡಿಯಲ್ಲಿ ಎಂಬ ಕರಾಳ ಸತ್ಯವನ್ನು ಮರೆಯಬೇಡಿ. ಸಾರ್ವಜನಿಕ ವೇದಿಕೆಯಲ್ಲಿ ನಿಮ್ಮ ಹಳೆಯ ಚರಿತ್ರೆಯನ್ನು ತಾವೇ ಬಯಲು ಮಾಡಿಕೊಳ್ಳಬೇಡಿ” ಎಂದು ಕೇಸರಿ ಪಡೆ ತಿರುಗೇಟು ನೀಡಿದೆ. ರಾಜ್ಯ ಸರ್ಕಾರ ದ್ವೇಷ ಭಾಷಣದ ಮಸೂದೆಯನ್ನು ತರಲು ಮುಂದಾಗಿರುವುದು ಇಂತಹ ಪಾಳೆಗಾರಿಕೆ ವರ್ತನೆಯನ್ನು ಮುಚ್ಚಿಹಾಕಲೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ಘಟನೆಯ ಹಿನ್ನೆಲೆಯೇನು?
ಶನಿವಾರ ನಡೆದ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಸಭೆಯಲ್ಲಿ, ಕಿರಣ್ ಹೆಬ್ಬಾರ್ ಎಂಬುವವರು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಪತ್ರವೊಂದನ್ನು ಬರೆದಿದ್ದರು ಎನ್ನಲಾಗಿದೆ. ಇದನ್ನು ಓದಿದ ಕೂಡಲೇ ಕೆಂಡಾಮಂಡಲರಾದ ಡಿಕೆ ಶಿವಕುಮಾರ್, “ಸರ್ಕಾರಕ್ಕೆ ಎಚ್ಚರಿಕೆ ನೀಡುವ ಭಾಷೆ ನಿಮ್ಮದಾಗಬಾರದು. ನನ್ನನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ. ಪ್ರೀತಿಯಿಂದ ಕೇಳಿದರೆ ಕೆಲಸ ಮಾಡಿಕೊಡುತ್ತೇನೆ, ಆದರೆ ದ್ವೇಷದ ಮಾತುಗಳು ನಡೆದರೆ ನಾನು ಸುಮ್ಮನಿರುವುದಿಲ್ಲ” ಎಂದು ಗುಡುಗಿದ್ದರು. ವೇದಿಕೆಯಲ್ಲೇ ಸಾರ್ವಜನಿಕರೊಬ್ಬರ ಮೇಲೆ ಡಿಸಿಎಂ ಗರಂ ಆದ ಪರಿ, ಇದೀಗ ವಿವಾದದ ಕಿಡಿ ಹೊತ್ತಿಸಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳ ಆಕ್ರೋಶ
ಇದೇ ವೇಳೆ, ಉಪಮುಖ್ಯಮಂತ್ರಿಗಳ ಈ ನಡೆಗೆ ಅಪಾರ್ಟ್‌ಮೆಂಟ್ ನಿವಾಸಿಗಳ ವಲಯದಲ್ಲೂ ಅಸಮಾಧಾನ ಸ್ಫೋಟಗೊಂಡಿದೆ. “ನಾವು ಕೇವಲ ವೋಟ್ ಬ್ಯಾಂಕ್ ಅಲ್ಲ, ತೆರಿಗೆ ಕಟ್ಟುವ ಪ್ರಜ್ಞಾವಂತ ನಾಗರಿಕರು. ನಮ್ಮ ಸಮಸ್ಯೆಗಳನ್ನು ಆಲಿಸುವ ಬದಲು ದಬಾಯಿಸುವುದು ಎಷ್ಟು ಸರಿ? ಗ್ರೇಟರ್ ಬೆಂಗಳೂರು ಚುನಾವಣೆ ಹತ್ತಿರ ಬರುತ್ತಿದೆ, ನಮ್ಮ ಹಕ್ಕುಗಳನ್ನು ಗೌರವಿಸುವವರಿಗೆ ಮಾತ್ರ ನಮ್ಮ ಮತ” ಎಂದು ಹಲವು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, “ಪ್ರೀತಿಯಿಂದ ಮಾತನಾಡಿದರೆ ಮಾತ್ರ ಕೆಲಸ” ಎಂಬ ಡಿಕೆಶಿ ಹೇಳಿಕೆ ಮತ್ತು ಅದಕ್ಕೆ ಪ್ರತಿಯಾಗಿ “ಹಳೆಯ ಚಾಳಿ ಬಿಡಿ” ಎಂಬ ಬಿಜೆಪಿಯ ವಾಗ್ದಾಳಿ ರಾಜಕೀಯ ಅಂಗಳದಲ್ಲಿ ಹೊಸ ಕಾಳಗಕ್ಕೆ ನಾಂದಿ ಹಾಡಿದೆ.








