ಉತ್ತರಪ್ರದೇಶದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು : ಸಿದ್ದರಾಮಯ್ಯ Siddaramaiah saaksha tv
ಬೆಂಗಳೂರು : ಸಂವಿಧಾನವೇ ಕುಸಿದುಬಿದ್ದಿರುವ ಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರ ಬಂಧನ ವಿಚಾರವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ರೈತರು ತನ್ನ ಶತ್ರುಗಳೆಂದು ತಿಳಿದುಕೊಂಡಿರುವ ಬಿಜೆಪಿ, ಅವರನ್ನು ಪೊಲೀಸರ ಮೂಲಕ ದಮನಿಸಲು ಪ್ರಯತ್ನಿಸಿ ವಿಫಲವಾದ ನಂತರ ಈಗ ನೇರವಾಗಿ ಹತ್ಯೆ ನಡೆಸಲು ಹೊರಟಿದೆ.
ಉತ್ತರಪ್ರದೇಶದಲ್ಲಿ ಸಚಿವರ ಮಗನ ಕಾರಿನಡಿಗೆ ಸಿಕ್ಕಿ ರೈತರು ಸಾವಿಗೀಡಾದ ಪ್ರಕರಣ ಬಿಜೆಪಿಯ ಕೊಲೆಗಡುಕ ಮನಸ್ಸಿಗೆ ಸಾಕ್ಷಿ.
ಉತ್ತರಪ್ರದೇಶದ ಯೋಗಿ ಆಧಿತ್ಯನಾಥ್ ಗೂಂಡಾ ರಾಜ್ಯದಲ್ಲಿ ದಲಿತರು, ರೈತರು, ಮಹಿಳೆಯರು ಮತ್ತು ಬಡವರ ಮಾನ-ಪ್ರಾಣ ಯಾವುದೂ ಸುರಕ್ಷಿತ ಅಲ್ಲ.
ಸಂವಿಧಾನವೇ ಕುಸಿದುಬಿದ್ದಿರುವ ಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು.
ಪ್ರತಿರೋಧ- ಭಿನ್ನಾಭಿಪ್ರಾಯವನ್ನು ಸಹಿಸದ ಬಿಜೆಪಿ ತನ್ನ ತಾಲಿಬಾನಿ ಮನಸ್ಥಿತಿಯನ್ನು ಬತ್ತಲು ಮಾಡಿಕೊಳ್ಳುತ್ತಿದೆ.
ರೈತರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಪ್ರಿಯಾಂಕಾ ಗಾಂಧಿ ಸರ್ಕಾರದ ಕೃತ್ಯ ಖಂಡನೀಯ ಎಂದು ಬರೆದುಕೊಂಡಿದ್ದಾರೆ.









