ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ತಮ್ಮ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಪಡೆಯಲು ಅದ್ಯಾವುದೂ ಬೇಕಿಲ್ಲ, ಕೇವಲ ಒಂದೇ ಒಂದು ಮಂತ್ರ ಸಾಕು. ಅದುವೇ ‘ಭಾವಿ ಸಿಎಂ’ ಎನ್ನುವ ಸ್ತುತಿ!
ಹೌದು, ಇಂತಹದೊಂದು ಅಚ್ಚರಿಯ ಹಾಗೂ ಸ್ವಾರಸ್ಯಕರ ಗುಟ್ಟನ್ನು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ವಿಧಾನಸಭೆಯಲ್ಲಿ ಬಹಿರಂಗಪಡಿಸಿ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದರು.
ಕೇವಲ 24 ಗಂಟೆಯಲ್ಲಿ 50 ಕೋಟಿ ಗಿಟ್ಟಿಸಿಕೊಂಡ ‘ಸುರೇಶ್’ ತಂತ್ರ
ವಿಧಾನಸಭೆಯ ಕಲಾಪದಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತ ಚರ್ಚೆ ನಡೆಯುವಾಗ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ವಿಪಕ್ಷದ ಶಾಸಕರು ಆಡಳಿತ ಪಕ್ಷದಿಂದ ಅನುದಾನ ಪಡೆಯಲು ಪಡುವ ಪಾಡನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸಾಮಾನ್ಯವಾಗಿ ವಿರೋಧ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬೇಕೆಂದರೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಅಲೆದಾಡಬೇಕು, ಕಾಲಿಗೆ ಬೀಳಬೇಕು, ಗಲಾಟೆ ಮಾಡಬೇಕು. ಇಷ್ಟೆಲ್ಲಾ ಕಸರತ್ತು ಮಾಡಿದರೂ ಅನುದಾನ ಸಿಗುವುದು ಕಷ್ಟ. ಆದರೆ, ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಎಚ್.ಕೆ. ಸುರೇಶ್ ಮಾತ್ರ ಅತ್ಯಂತ ಸುಲಭವಾಗಿ ಬರೋಬ್ಬರಿ 50 ಕೋಟಿ ರೂಪಾಯಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
ವಿಶ್ವನಾಥ್ ಮಾತನ್ನು ಕೇಳಿ ಅಚ್ಚರಿಗೊಂಡ ಸದಸ್ಯರು, ಅದು ಹೇಗೆ ಸಾಧ್ಯ? ಎಂದು ಹುಬ್ಬೇರಿಸಿದರು. ಆಗ ವಿಶ್ವನಾಥ್, ವೆರಿ ಸಿಂಪಲ್, ನಮ್ಮ ಸುರೇಶ್ ಅವರಿಗೆ ಡಿಕೆಶಿ ವೀಕ್ನೆಸ್ ಗೊತ್ತಾಗಿದೆ. ಮೊನ್ನೆ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುವಾಗ ಸುರೇಶ್ ಅವರು ಡಿಕೆಶಿ ಅವರನ್ನು ‘ಭಾವಿ ಸಿಎಂ’ ಎಂದು ಸಂಬೋಧಿಸಿ ಹೊಗಳಿದರು. ಈ ಹೊಗಳಿಕೆಗೆ ಫಿದಾ ಆದ ಡಿಕೆಶಿ, ಮರುದಿನವೇ ಸುರೇಶ್ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ರಹಸ್ಯ ಬಿಚ್ಚಿಟ್ಟರು.
ವಿಷಯ ಇಲ್ಲಿಗೇ ನಿಲ್ಲಲಿಲ್ಲ. ಮುಂದುವರಿದು ಮಾತನಾಡಿದ ವಿಶ್ವನಾಥ್, ನಮ್ಮ ಸುರೇಶ್ ಕೂಡ ಬಾರಿ ಬುದ್ಧಿವಂತ. ಅವರು ಡಿಕೆಶಿಯವರನ್ನು ‘ಭಾವಿ ಮುಖ್ಯಮಂತ್ರಿ’ ಎಂದು ಕರೆದರೇ ವಿನಃ, ‘ಯಾವಾಗ ಮುಖ್ಯಮಂತ್ರಿ ಆಗುತ್ತೀರಿ’ ಎಂದು ಹೇಳದೆ ಸೇಫ್ ಆಗಿ ಬಚಾವಾಗಿದ್ದಾರೆ ಎಂದು ಕಾಲೆಳೆದರು. ವಿಶ್ವನಾಥ್ ಅವರ ಈ ಮಾತಿಗೆ ಸ್ವತಃ ಡಿ.ಕೆ. ಶಿವಕುಮಾರ್ ಸೇರಿದಂತೆ ಆಡಳಿತ ಮತ್ತು ವಿಪಕ್ಷದ ಸದಸ್ಯರೆಲ್ಲರೂ ಗೊಳ್ಳೆಂದು ನಕ್ಕರು. ಒಟ್ಟಿನಲ್ಲಿ ಡಿಕೆಶಿ ಬಳಿ ಅನುದಾನ ಪಡೆಯಲು ‘ಭಾವಿ ಸಿಎಂ’ ಎಂಬ ಮಂತ್ರದಂಡವೇ ಸಾಕು ಎಂಬ ಸಂದೇಶ ಸದನದಲ್ಲಿ ರವಾನೆಯಾಯಿತು.
ವಿಧಾನಸಭೆಯಲ್ಲಿ ಅನುದಾನದ ರಹಸ್ಯ ಬಯಲಾದರೆ, ಇತ್ತ ವಿಧಾನ ಪರಿಷತ್ ನಲ್ಲಿ ಹೆಸರಿನ ಗೊಂದಲವೊಂದು ಭಾರೀ ಹಾಸ್ಯ ಪ್ರಸಂಗಕ್ಕೆ ಕಾರಣವಾಯಿತು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತು ಶುಲ್ಕ ವಿಧಿಸುವ ವಿಧೇಯಕದ ಮೇಲೆ ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಅವರ ಸಲಹೆಗಳನ್ನು ಪ್ರಸ್ತಾಪಿಸುವಾಗ, ಸಚಿವರು ಆತ್ಮೀಯತೆಯಿಂದ ಬರೀ ಐವಾನ್.. ಐವಾನ್.. ಎಂದು ಸಂಬೋಧಿಸುತ್ತಿದ್ದರು.
ತಕ್ಷಣ ಎದ್ದು ನಿಂತ ಜೆಡಿಎಸ್ ಸದಸ್ಯ ಭೋಜೇಗೌಡ, ಸಚಿವರೇ ನಿಮಗೆ ಕೈ ಮುಗಿಯುತ್ತೇನೆ, ದಯಮಾಡಿ ಅವರನ್ನು ಪೂರ್ತಿ ಹೆಸರಿನಿಂದ ಕರೆಯಿರಿ. ಬರೀ ‘ಐವಾನ್’ ಎಂದರೆ ಉರ್ದು ಅಥವಾ ಅರೇಬಿಕ್ ಭಾಷೆಯಲ್ಲಿ ‘ಹೈವಾನ್’ (ಕ್ರೂರ ಪ್ರಾಣಿ ಅಥವಾ ರಾಕ್ಷಸ) ಎಂಬ ಅರ್ಥ ಬರುವ ಸಾಧ್ಯತೆಯಿದೆ. ಇದು ಅಪಾರ್ಥಕ್ಕೆ ಎಡೆಮಾಡಿಕೊಡುತ್ತದೆ. ಆದ್ದರಿಂದ ‘ಐವಾನ್ ಡಿಸೋಜಾ’ ಎಂದೇ ಕರೆಯಿರಿ ಎಂದು ಮನವಿ ಮಾಡಿದರು.
ಭೋಜೇಗೌಡರ ಈ ಸಮಯಪ್ರಜ್ಞೆ ಮತ್ತು ಭಾಷಾ ಚತುರತೆಯನ್ನು ಕಂಡ ಸದನದ ಸದಸ್ಯರು ಜೋರಾಗಿ ನಗಲಾರಂಭಿಸಿದರು. ಸಚಿವ ಬೈರತಿ ಸುರೇಶ್ ಕೂಡ ನಗುನಗುತ್ತಲೇ ತಿದ್ದಿಕೊಂಡು ಮಾತನಾಡಿದರು.
ಒಟ್ಟಾರೆ ಈ ಬಾರಿಯ ಅಧಿವೇಶನವು ಗಂಭೀರ ಚರ್ಚೆಗಳ ನಡುವೆಯೂ ಇಂತಹ ಸ್ವಾರಸ್ಯಕರ, ಹಾಸ್ಯಮಯ ಪ್ರಸಂಗಗಳಿಗೆ ಸಾಕ್ಷಿಯಾಯಿತು.








