ಹೈಕಮಾಂಡ್ ಮುಂದೆ ಬಿಎಸ್ ವೈ ಮಂಡಿಯೂರಲು ಕಾರಣವೇನು..?
ಬೆಂಗಳೂರು : ಹೈಕಮಾಂಡ್ ಸೂಚನೆ ಮೇರೆಗೆ ಬಿ.ಎಸ್.ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿದೆ. ಜುಲೈ 26ಕ್ಕೆ ಮುಖ್ಯಮಂತ್ರಿ ರಾಜೀನಾಮೆ ನೀಡೋದು ಬಹುತೇಕ ಖಚಿತವಾಗಿದೆ.
ನಾನೇ ಸಿಎಂ ಎನ್ನುತ್ತಿದ್ದ ಬಿಎಸ್ ವೈ..!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಬಾರಿ ಮುನ್ನಲೆಗೆ ಬಂದಿದೆ. ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ಎರಡು ವರ್ಷ ನಾನೇ ಸಿಎಂ ಎಂದು ಎದೆಯುಬ್ಬಿಸಿ ಹೇಳುತ್ತಿದ್ದರು. ಕಳೆದ ಎರಡು ಮೂರು ತಿಂಗಳ ಹಿಂದೆ ಕೂಡ ರಾಜ್ಯದಲ್ಲಿ ನಾಯಕತ್ವ ಇಲ್ಲ. ನನ್ನ ಕೆಲಸಕ್ಕೆ ಹೈಕಮಾಂಡ್ ಮೆಚ್ಚಿಕೊಂಡಿದೆ. ಮುಂದಿನ ಚುನಾವಣೆವರೆಗೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟಸಿದ್ದರು.
ಆದ್ರೆ ಕಳೆದ ತಿಂಗಳು ಏಕಾಏಕಿ ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿಕೆ ನೀಡಿದರು. ಇದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿತ್ತು. ಬೆಂಗಳೂರಿನಲ್ಲಿ ಈ ರೀತಿಯಾಗಿ ಹೇಳುತ್ತಿದ್ದಂತೆ ದೆಹಲಿಯಿಂದ ಅರುಣ್ ಸಿಂಗ್ ಕೂಡ ಬೆಂಗಳೂರಿಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಮತ್ತೀಗ ಮುಖ್ಯಮಂತ್ರಿ ಬಿ.ಎಸ್.ವೈ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ ಎಂದು ಎಲ್ಲದಕ್ಕೂ ಸಿದ್ಧರಾಗಿ ನಿಂತಿದ್ದಾರೆ.
ಬಿಎಸ್ ವೈ ಈ ನಿರ್ಧಾರಕ್ಕೆ ಕಾರಣವೇನು..?
ವಯಸ್ಸು ಮತ್ತು ಆರೋಗ್ಯ : ಹೌದು..! ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮ್ಮ ವಯಸ್ಸು ಮತ್ತು ಆರೋಗ್ಯದ ಪರಿಸ್ಥಿತಿ ಬಗ್ಗೆ ಅರಿವಿದೆ. ಬಿಜೆಪಿಯ ಅಲಿಖಿತ ಸಂವಿಧಾನದ ಪ್ರಕಾರ 75 ವರ್ಷ ಮೇಲ್ಪಟ್ಟವರು ಯಾವುದೇ ಹುದ್ದೆಯಲ್ಲಿ ಇರಬಾರದು. ಆದ್ರೆ ಬಿಎಸ್ ವೈ ಅವರಿಗೆ 75 ವರ್ಷ ಮೇಲ್ಪಟ್ಟರೂ ಅಧಿಕಾರದಲ್ಲಿರಲು ಹೈಕಮಾಂಡ್ ಅವಕಾಶ ನೀಡಿದೆ. ಇದನ್ನ ಸ್ವತಃ ಯಡಿಯೂರಪ್ಪನವರೇ ಸ್ಪಷ್ಟಪಡಿಸಿದ್ದಾರೆ. ಇನ್ನು ಆರೋಗ್ಯದ ದೃಷ್ಠಿಯಿಂದ ಅವರು ರಾಜೀನಾಮೆ ನಿರ್ಧಾರಕ್ಕೆ ಬಂದಿರಬಹುದು.
ಫಲಿಸದ ಬ್ರಹ್ಮಾಸ್ತ್ರ : ಹೈಕಮಾಂಡ್ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸೋದು ಪಕ್ಕಾ ಆಗುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದ ಯಡಿಯೂರಪ್ಪ, ದೆಹಲಿ ವರಿಷ್ಠರ ವಿರುದ್ಧ ಕಾವಿ ಗುರಾಣಿ ಪ್ರಯೋಗಿಸಿದ್ದರು. ಆದ್ರೆ ಅದು ಫಲಕೊಡಲಿಲ್ಲ.
ಮಗನ ಭವಿಷ್ಯ : ಬಿ.ವೈ. ರಾಘವೇಂದ್ರ ಈಗಾಗಲೇ ಸಂಸದರಾಗಿದ್ದಾರೆ. ಆದ್ರೆ ಬಿ.ವೈ. ವಿಜಯೇಂದ್ರ ಅವರಿಗೆ ಸ್ಥಿತಿ ಆಗಿಲ್ಲ. ಅವರಿನ್ನೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಕೇವಲ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಈಗಾಗಲೇ ಅವರ ಮೇಲೆ ಸೂಪರ್ ಸಿಎಂ ಎಂಬ ಆರೋಪವೂ ಇದೆ. ಒಂದು ವೇಳೆ ಬಿಎಸ್ ವೈ ಸೈಡ್ ಲೈನ್ ಆದ್ರೆ ವಿಜಯೇಂದ್ರರನ್ನೂ ಕೂಡ ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಾರೆ ಅನ್ನೋ ಆತಂಕ ಬಿಎಸ್ ವೈಗಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಗೆ ವಿಧಯರಾಗಿದ್ದುಕೊಂಡೇ ಮಗನ ಭವಿಷ್ಯ ರೂಪಿಸಲು ಬಿಎಸ್ ವೈ ನಿರ್ಧರಿಸಬಹುದು.
ಪಕ್ಷವನ್ನು ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿಲ್ಲ : ಹೌದು..! ಈ ಹಿಂದೆ ಪಕ್ಷದ ವಿರುದ್ಧ ಗುಡುಗಿ ಪ್ರಾದೇಶಿಕ ಪಕ್ಷಕಟ್ಟಿದಂತೆ ಈಬಾರಿ ಪಕ್ಷವನ್ನು ಎದುರು ಹಾಕಿಕೊಳ್ಳುವ ರಿಸ್ಕ್ ಮಾಡಲು ಬಿಎಸ್ ಯಡಿಯೂರಪ್ಪ ಸಿದ್ಧರಿಲ್ಲ. ಇದಕ್ಕೆ ಅವರ ವಯಸ್ಸು ಕೂಡ ಕಾರಣವಾಗಿರಬಹುದು.