ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆಂದು ಸಜ್ಜಾಗಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮತ್ತೆ ನಿರಾಸೆಯಾಗಿದೆ.
ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ, ಡಿಸೆಂಬರ್ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಬಳಿಕ ನೋಡೋಣ ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ರವಾನಿಸಿದೆ.
ಆರ್.ಆರ್ ನಗರ ಹಾಗೂ ಶಿರಾ ಉಪಚುನಾವಣೆ ಗೆದ್ದು ಸಂಭ್ರಮದಲ್ಲಿದ್ದ ಸಿಎಂ ಬಿಎಸ್‍ವೈ, ಸಂಪುಟ ವಿಸ್ತರಣೆ ಅಥವಾ ಸರ್ಜರಿಗೆ ಪ್ಲ್ಯಾನ್ ಹಾಕಿಕೊಂಡಿದ್ದರು. ಕೆಲ ದಿನಗಳ ಹಿಂದೆ ದೆಹಲಿಗೂ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಬಳಿ ಚರ್ಚಿಸಿ, ಎರಡು ಪಟ್ಟಿಯನ್ನೂ ಕೊಟ್ಟು ಬಂದಿದ್ದರು.
ಎರಡು-ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗಲಿದೆ, ದೆಹಲಿಯಿಂದ ಪಟ್ಟಿ ಬರಬೇಕಷ್ಟೇ ಎಂದು ಯಡಿಯೂರಪ್ಪ ಹಲವು ಬಾರಿ ಹೇಳಿಕೆ ನೀಡಿದ್ದರು. ಆದರೆ, ಮತ್ತೆ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಸೂಚಿಸಿರುವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ತುದಿಗಾಲ ಮೇಲೆ ನಿಂತಿದ್ದ ಬಿಎಸ್‍ವೈಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಎರಡು ತಿಂಗಲ ಹಿಂದೆಯೂ ಸಹ ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಮನವಿಯನ್ನು ಕಸದ ಬುಟ್ಟಿಗೆ ಹಾಕಿತ್ತು. ಈಗ ಎರಡನೇ ಬಾರಿಗೆ ಸಂಪುಟ ಸರ್ಕಸ್‍ಗೆ ಬ್ರೇಕ್ ಹಾಕಿರುವ ಬಿಜೆಪಿ ಹೈಕಮಾಂಡ್ ತೀರ್ಮಾನ, ಸಚಿವರಾಗುವ ಕನಸು ಕಂಡಿದ್ದ ಆಕಾಂಕ್ಷಿ ಶಾಸಕರಿಗೆ ತೀವ್ರ ನಿರಾಸೆ ಉಂಟುಮಾಡಿದೆ,
ಬಿಎಸ್‍ವೈಗೆ ದುಂಬಾಲು ಬಿದ್ದ ಆಕಾಂಕ್ಷಿಗಳು..!
ಶಿರಾ, ಆರ್.ಆರ್ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆಗೆ ಸಜ್ಜಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದರು. ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳುವಂತೆ ಬೇರೆ ಬೇರೆ ನಾಯಕರ ಮೂಲಕ ಲಾಬಿ ಮಾಡಿ ಒತ್ತಡ ಹೇರಿಸುವ ಯತ್ನ ಮಾಡಿದ್ದಾರೆ.
ಪ್ರತಿದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮಗೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಮನವಿ ಮಾಡಿ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಇಂದು ಬರುತ್ತೆ, ಇಲ್ಲ ನಾಳೆ ದೆಹಲಿಯಿಂದ ಪಟ್ಟಿ ಬರುತ್ತದೆ ಎಂದು ಎದುರು ನೋಡುತ್ತಿದ್ದ ಯಡಿಯೂರಪ್ಪ ಅವರಿಗೂ ಹೈಕಮಾಂಡ್ ನಿರ್ಧಾರ ಟೆನ್ಶನ್ ತಂದಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕ ಎಂ.ಪಿ ರೇಣುಕಾಚಾರ್ಯ, ಸಿಎಂ ಭೇಟಿ ಮಾಡಿ ನಿರಾಸೆಯಿಂದ ವಾಪಸ್ಸಾಗಿದ್ದಾರೆ. ಹೆಚ್. ವಿಶ್ವನಾಥ್, ಮುನಿರತ್ನ, ಸಿ.ಪಿ. ಯೋಗೀಶ್ವರ್, ಎಂಟಿಬಿ ನಾಗರಾಜ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಮೈತ್ರಿ ಸರ್ಕಾರದ ಪತನದ ಮಾಸ್ಟರ್ ಮೈಂಡ್ ಸಚಿವ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದರೂ ವರಿಷ್ಠರು ಬಿಎಸ್‍ವೈ ಓಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮತ್ತೊಮ್ಮೆ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








