ನವದೆಹಲಿ: ರಾಜ್ಯದಲ್ಲಿ ಕೆಲ ತಿಂಗಳಿನಿಂದ ಆಪರೇಷನ್ ಕಮಲ ನಡೆಯುತ್ತಲೇ ಇದೆ. ಅಧಿಕಾರಕ್ಕಾಗಿ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಂಪ್ ಮಾಡುತ್ತಲೇ ಇರುತ್ತಾರೆ. ಸದ್ಯ ಬಿಜೆಪಿ ಅಧಿಕಾರದಲ್ಲಿರುವ ಕಾರಣ, ಇತರೆ ಪಕ್ಷದ ಶಾಸಕರು, ಸಂಸದರು, ರಾಜಕಾರಣಿಗಳು ಹಲವು ಕಾರಣಗಳಿಗೆ ಪಕ್ಷಾಂತರ ಮಾಡುತ್ತಾರೆ. ಅವರಿಗೆ ಬಿಜೆಪಿ ನಾಯಕರಿಂದ ಆಹ್ವಾನ ಬಂದಿದೆ ಎಂಬಿತ್ಯಾದಿ ಸುದ್ದಿಗಳು ಹರಡುವುದೂ ಇದ್ದೇ ಇದೆ. ಹೀಗಿರುವಾಗ ಯುವ ಸಂಸದರೊಬ್ಬರು ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರಿಗೆ ಬಹಿರಂಗವಾಗಿಯೇ ಬಿಜೆಪಿ ಸೇರಿಕೊಳ್ಳವಂತೆ ಆಹ್ವಾನಿಸಿದ್ದಾರೆ.
ಹೌದು…! ಇದು ಅಚ್ಚರಿ ಎನಿಸಿದರೂ ನಿಜ. ಕಾಂಗ್ರೆಸ್ ಕಟ್ಟಾಳು ಡಿ.ಕೆ ಸುರೇಶ್ ಅವರಿಗೆ ಬಿಜೆಪಿಗೆ ಸೇರಿಕೊಳ್ಳವಂತೆ ಬಿಜೆಪಿಯ ಸಂಸದರು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ. ಲಡಾಖ್ ನ ಸಂಸದ ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್ ಅವರು ಡಿ.ಕೆ ಸುರೇಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅದು ಕೂಡ ಕನ್ನಡದಲ್ಲಿ. ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ಎಲ್ಲ ಸಂಸದರೂ ಅಲ್ಲಿ ಸೇರಿದ್ದು, ಕರ್ನಾಟಕದ ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಅವರಿಂದ ಕನ್ನಡ ಕಲಿತು, ಮಾತಿನ ಪ್ರಯೋಗವನ್ನು ಡಿ.ಕೆ.ಸುರೇಶ್ ಅವರ ಜತೆಗೆ ಮಾಡಿದ್ದಾರೆ. ಅವರು ಈ ವಿಷಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಡಿ.ಕೆ.ಸುರೇಶ್ ಅವರೂ ಚಿತ್ರದಲ್ಲಿದ್ದಾರೆ.