ಬೆಂಗಳೂರು: ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕಾಗಿ ನಡೆದ ವಿಧಾನಪರಿಷತ್ನಲ್ಲಿ ಉಪಸಭಾಪತಿಯನ್ನು ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ಸದಸ್ಯರ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.
ವಿಧಾನಸೌಧದದಿಂದ ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಿದ ನಿಯೋಗ, ಇಂದು ವಿಧಾನಪರಿಷತ್ ಕಲಾಪದ ವೇಳೆ ನಡೆದ ಘಟನೆಗಳ ಬಗ್ಗೆ ರಾಜ್ಯಪಾಲ ವಜುಬಾಯ್ ವಾಲಾ ಅವರಿಗೆ ವಿವರಣೆ ನೀಡಿದೆ.
ಸಚಿವರಾದ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಎಸ್.ಟಿ ಸೋಮಶೇಖರ್, ಡಿಸಿಎಂ ಲಕ್ಷ್ಮಣ್ ಸವದಿ, ಜೆಡಿಎಸ್ ಸದಸ್ಯ ಪುಟ್ಟಣ್ಣ, ರಮೇಶ್ಗೌಡ ನೇತೃತ್ವದ ನಿಯೋಗ ದೂರು ಕೊಟ್ಟಿದೆ.
ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ನ್ನು 14 ದಿನಗಳ ಮೊದಲೇ ಕೊಡಲಾಗಿತ್ತು. ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಮೇಲೆ ಅವರು ಸದನದ ಕಲಾಪ ನಡೆಸುವಂತಿಲ್ಲ ಎಂದು ಕಾನೂನಿನಲ್ಲಿ ಉಲ್ಲೇಖವಿದೆ. ಆದರೂ ಸಭಾಪತಿಗಳು ನಿಯಮ ಉಲ್ಲಂಘಿಸಿ ಕಲಾಪ ನಡೆಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸದಸ್ಯರು ಉಪಸಭಾಪತಿಗಳ ಮೇಲೆ ಹಲ್ಲೆ ಮಾಡಿ, ಪೀಠದಿಂದ ಕೆಳಗಿಳಿಸಿ ವಿಧಾನಪರಿಷತ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ.
ಹೀಗಾಗಿ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ ಮತ್ತೊಮ್ಮೆ ಸಭಾಪತಿಗಳ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ವಿಧಾನಪರಿಷತ್ ಅಧಿವೇಶನ ಕರೆಯಲು ಸೂಚನೆ ನೀಡಬೇಕು.
ವಿಧಾನಪರಿಷತ್ ಕಲಾಪವನ್ನು ಕಲಂ 182 ಅಡಿ ಕಟ್ಟುನಿಟ್ಟಾಗಿ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ನಿಯೋಗ ರಾಜ್ಯಪಾಲರನ್ನು ಆಗ್ರಹಿಸಿದೆ.
ದೂರು ನೀಡಿದ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಸಭಾಪತಿಗಳು ಬಹುಮತ ಕಳೆದುಕೊಂಡಿದ್ದಾರೆ. ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel