ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ತನ್ನ ಪಾಲಿನ ಮೂರು ಸೀಟು ಗೆದ್ದುಕೊಂಡಿದೆ. ಅಲ್ಲದೇ, ನಿರೀಕ್ಷೆಯಂತೆ ಬಿಜೆಪಿ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ. ಕುಮಾರಸ್ವಾಮಿ, ಬಿಜೆಪಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. 222 ಮತಗಳು ಸಹ ಸಿಂಧುವಾಗಿದ್ದು, ಕಾಂಗ್ರೆಸ್ನ ಅಜಯ್ ಮಾಕೇನ್ -47, ನಾಸೀರ್ ಹುಸೇನ್ – 47, ಜಿ.ಸಿ. ಚಂದ್ರಶೇಖರ – 45 ಮತಗಳೊಂದಿಗೆ ಗೆಲುವು ಸಾಧಿಸಿದರೆ, ಬಿಜೆಪಿಯ ನಾರಾಯಣಸಾ ಭಾಂಡಗೆ 47 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿಗೆ 36 ಮತಗಳು ಬಿದ್ದಿವೆ. ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಜೆಡಿಎಸ್ನ 19 ಮತಗಳು ಬಿದ್ದಿದ್ದರೆ, ಮಿತ್ರ ಪಕ್ಷ ಬಿಜೆಪಿಯಿಂದ 16 ಮತಗಳು ಮಾತ್ರ ಬಂದಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿದ್ದಂತೆ ಸಹಜವಾಗಿ ಕಾಂಗ್ರೆಸ್ ಗೆ ಅಡ್ಡಮತದಾನ ಭೀತಿ ಶುರುವಾಗಿತ್ತು. ಆದರೆ, ಕಾಂಗ್ರೆಸ್ ನಾಯಕರು ತಮ್ಮ ಶಾಸಕರ ಜೊತೆ ಜೊತೆಗೆ ಬಿಜೆಪಿ ಹಾಗೂ ಪಕ್ಷೇತರ ಶಾಸಕರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ, ದರ್ಶನ್ ಪುಟ್ಟಣ್ಣಯ್ಯ, ಪುಟ್ಟ ಸಿದ್ದೇಗೌಡ, ಲತಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಬೆಂಬಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ. ಬಿಜೆಪಿಯ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅಡ್ಡ ಮತದಾನ ಮಾಡಿದ್ದಾರೆ. ಒಟ್ಟು 223 ಮತಗಳ ಪೈಕಿ 222 ಶಾಸಕಕರು ತಮ್ಮ ಮತದಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದ 135 ಶಾಸಕರು, ಮೂವರು ಪಕ್ಷೇತರ ಶಾಸಕರು, ಬಿಜೆಪಿಯ 65 ಶಾಸಕರು, ಜೆಡಿಎಸ್ ನ 19 ಶಾಸಕ ಮತದಾನ ಮಾಡಿದ್ದಾರೆ.