ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು – BJP ಬಿಟ್ಟು RJD ಹಿಂದೆ ಹೋದ ಜೆಡಿಯು..
ಬಿಜೆಪಿ ಮೈತ್ರಿಯಿಂದ ಹೊರಬರಲು ನಿರ್ಧರಿಸಿರುವ ಜೆಡಿಯು ನಿರ್ಧಾರದಿಂದಾಗಿ ಬಿಹಾರದಲ್ಲಿ ರಾಜಕೀಯ ಕಾವು ಏರಿದೆ. ಜೆಡಿಯು ಸಂಸದರು ಹಾಗೂ ಶಾಸಕರ ಜತೆಗಿನ ಸಭೆಯ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇದೀಗ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲೂಪ್ರಸಾದ್ ಯಾದವ್ ಅವರ ಆರ್ಜೆಡಿ ಪಕ್ಷಗಳು ಒಂದಾಗಲಿವೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯ 16 ಸಚಿವರು ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಬಿಜೆಪಿ ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್ ಅವರ ನಿವಾಸದಲ್ಲಿ 16 ಬಿಜೆಪಿ ಸಚಿವರು ಭೇಟಿಯಾಗಿದ್ದಾರೆ. ಸಭೆಯ ನಂತರ ಬಿಜೆಪಿಯ ಎಲ್ಲಾ ಸಚಿವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದರು. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಬಿಹಾರ ನಾಯಕರ ಇಂದು ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ.
ಬಿಹಾರ ವಿಧಾನ ಸಭೆಯ ಸಂಖ್ಯಾಬಲ ಹೀಗಿದೆ: ಬಿಹಾರ 243 ಸದಸ್ಯ ಬಲದ ವಿಧಾನಸಭೆಯನ್ನು ಹೊಂದಿದೆ. ಒಟ್ಟು ಶಾಸಕರ ಪೈಕಿ ಬಿಜೆಪಿ 77 ಶಾಸಕರನ್ನು ಹೊಂದಿದ್ದರೆ, ಜೆಡಿಯು 45 ಸದಸ್ಯರನ್ನು ಹೊಂದಿದೆ. ಆರ್ಜೆಡಿ 127 ಶಾಸಕರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿದೆ.








