BJP ನಾಯಕರು ಹುಟ್ಟು ಸುಳ್ಳುಕೋರರು
ಬೆಂಗಳೂರು : ಬಿಜೆಪಿ ನಾಯಕರು ಹುಟ್ಟು ಸುಳ್ಳುಕೋರರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, ಕೊಡಗಿನಲ್ಲಿ ನನ್ನ ವಿರುದ್ಧ ನಡೆದ ಪ್ರತಿಭಟನೆ ಪೂರ್ವಯೋಜಿತವೆನ್ನುವುದು ಪೊಲೀಸರ ನಿಷ್ಕ್ರಿಯತೆಯಿಂದ ಸ್ಪಷ್ಟವಾಗಿದೆ. ಮೊದಲ ಸಲ ಪ್ರತಿಭಟನೆ ನಡೆದಾಗಲೇ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ ಅವರು ಕಣ್ಣುಮುಚ್ಚಿಕೊಂಡು ಶಾಮೀಲಾಗಿದ್ದ ಕಾರಣದಿಂದಲೇ ನಂತರ 3-4 ಕಡೆ ಪ್ರತಿಭಟನೆ ನಡೆದವು.
ಬಿಜೆಪಿ ನಾಯಕರು ಹುಟ್ಟು ಸುಳ್ಳುಕೋರರು. ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತನೆಂದು ಈಗ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಸಚಿವ ಜಿವಿಜಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರೂ ಮೊಟ್ಟೆ ಎಸೆದ ಸಂಪತ್ ನಮ್ಮ ಪಕ್ಷದವನಲ್ಲ, ಬಿಜೆಪಿಯವನು ಎಂದು ಹೇಳಿ, ಬಿಜೆಪಿ ಸುಳ್ಳನ್ನು ಬಯಲು ಮಾಡಿದ್ದಾರೆ.
ಎಸಿಬಿ ರದ್ದತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ತೀರ್ಪು ಹೊರಬಿದ್ದ ದಿನವೇ ಎಂದು ಹೇಳಿದ್ದೇವೆ. ನಾವು ತೀರ್ಪಿನ ವಿರುದ್ಧ ಮೇಲ್ಮನವಿ ಹಾಕುವುದಿಲ್ಲ. ತೀರ್ಪಿನ ಜಾರಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಬರೆದುಕೊಂಡಿದ್ದಾರೆ.