ಮತ್ತೆ ದೆಹಲಿ ದಂಡಯಾತ್ರೆ ಆರಂಭಿಸಿದ “ಸೈನಿಕ”
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದು, ಆಗಾಗ ಹೊಗೆಯಾಡುತ್ತಲೇ ಇರುತ್ತದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಂದು ಹೋದ ನಂತರ ಎಲ್ಲವೂ ಸರಿಯಾಗಿದೇ ಎಂದು ಪಕ್ಷದ ನಾಯಕರು ಪುಂಗಿದರೂ, ನಾಯಕತ್ವ ಬದಲಾವಣೆ ಚರ್ಚೆ ಪಕ್ಷದ ಪಡಸಾಲೆಯಲ್ಲಿ ನಡೆಯುತ್ತಲೇ ಇದೆ ಅನ್ನೋದು ವಾಸ್ತವದ ಸಂಗತಿಯಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಕೆಲ ಸಚಿವರು, ಶಾಸಕರು ನಡೆದುಕೊಳ್ಳುತ್ತಿದ್ದಾರೆ ಕೂಡ. ಅದಕ್ಕೆ ತಾಜಾ ಉದಾಹರಣೆ ಸಚಿವ ಸಿ.ಪಿ.ಯೋಗೇಶ್ವರ್ ಅವರು ರಾತ್ರೋರಾತ್ರಿ ದೆಹಲಿಗೆ ದೌಡಾಯಿಸಿರೋದು..!!
ಹೌದು..! ನಾಯಕತ್ವ ಬದಲಾವಣೆ ವಿಚಾರಕ್ಕೆ ಆಗ್ಗಿಂದಾಗೆ ಬೆಂಕಿ ಹಚ್ಚುವ ಸಿ.ಪಿ.ಯೋಗೇಶ್ವರ್ ನಿನ್ನೆ ರಾತ್ರಿ ದೆಹಲಿ ವಿಮಾನ ಹೇರಿದ್ದಾರೆ.
ನಿನ್ನೆಯಷ್ಟೇ ಪರೀಕ್ಷೆ ಬರೆದು ರಿಸಲ್ಟ್ ಗೆ ಕಾಯ್ತಿದ್ದೇವೆ ಎಂದಿದ್ದ ಯೋಗೇಶ್ವರ್, ಇಂದು ಹೈಕಮಾಂಡ್ ನಾಯಕರ ಭೇಟಿ ಮಾಡುವ ಸಾಧ್ಯತೆಗಳಿವೆ.
ಕೆಲದಿನಗಳ ಹಿಂದಷ್ಟೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಯೋಗೇಶ್ವರ್ ದೆಹಲಿಗೆ ಭೇಟಿ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.









