ಬೆಂಗಳೂರು : ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಆಡುತ್ತಿದ್ದು, ಕೆಲ ಬಿಜೆಪಿ ಶಾಸಕರು ನಿನ್ನೆ ರಾತ್ರಿ ಪ್ರತ್ಯೇಕ ಸಭೆ ನಡೆಸಿ ತಮ್ಮ ಬೇಗುದಿಯನ್ನು ಹೊರ ಹಾಕಿದ್ದಾರೆ. ವಿಮಾನ ಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಶಾಸಕರು, ಕಳೆದ ರಾತ್ರಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಸಭೆ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ದೆಹಲಿ ವರಿಷ್ಠರ ಗಮನಕ್ಕೆ ತರುವಂತೆ ಶೆಟ್ಟರ್ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವ ಜಗದೀಶ್ ಶೆಟ್ಟರ್, ನಿನ್ನೆ ನಮ್ಮ ಮನೆಯಲ್ಲಿ ಶಾಸಕರ ಜೊತೆ ಸಭೆ ನಡೆಸಿಲ್ಲ. ಸಭೆ ನಡೆದಿದೆ ಎನ್ನೋದು ಸತ್ಯಕ್ಕೆ ದೂರವಾದ ಮಾತು. ಶಾಸಕರು ದಿನ ನಿತ್ಯ ಬರುವುದು ಹೋಗೋದು ಮಾಡ್ತಾರೆ. ದಿನ ನಿತ್ಯ ಆಗೋದು ಇದು. ಶಾಸಕರಿಗೆ ಬರಬೇಡಿ ಅನ್ನೋಕೆ ಬರಲ್ಲ. ಅವರವರ ಕ್ಷೇತ್ರದ ಕೈಗಾರಿಕೆ ಮುಂತಾದ ವಿಚಾರ ಚರ್ಚೆ ಮಾಡೋಕೆ ಬರುತ್ತಿರುತ್ತಾರೆ. ಬಂಡಾಯ ನಾಯಕರ ಜೊತೆ ಸಿಎಂ ಬಿಎಸ್ವೈ ಬಗ್ಗೆ ಸಭೆ ಯಾವುದೂ ನಡೆದಿಲ್ಲ. ಸಿಎಂ ಬಿಎಸ್ ವೈಗೆ ಇದನ್ನ ವಿವರಿಸುವ ಅಗತ್ಯವೇ ಇಲ್ಲ ಎಂದಿದ್ದಾರೆ.
ಸದ್ಯ ರಾಜ್ಯ ಕಮಲ ಪಾಳಯದಲ್ಲಿ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದ್ದು, ಇದೀಗ ಹೊಗೆಯಾಡತೊಡಗಿದೆ.