ಮಾದರಿ ಸಂಸದ ಗೌತಮ್ ಗಂಭೀರ್…ಬಡವರ ಹಸಿವು ನೀಗಿಸುವ ನೇತಾರ
ಗೌತಮ್ ಗಂಭೀರ್… ಹಾಲಿ ಸಂಸದ.. ಮಾಜಿ ಕ್ರಿಕೆಟಿಗ. ತನ್ನ ನೇರ ಮಾತು, ನಡೆ ನುಡಿಗಳಿಂದಲೇ ಗೌತಮ್ ಗಂಭೀರ್ ಗಮನ ಸೆಳೆಯುತ್ತಾರೆ.
ಇದ್ದದ್ದನ್ನು ಇದ್ದ ಹಾಗೇ ಹೇಳುವ ಜಾಯಮಾನ ಗೌತಮ್ ಗಂಭೀರ್. ಅವರ ಮಾತಿನಲ್ಲಿ ಹಾಗೂ ಮನಸ್ಸಿನಲ್ಲಿ ಒಂಚೂರು ಕಲ್ಮಶವಿಲ್ಲ.
ಕ್ರಿಕೆಟಿಗನಾಗಿ ಮೈದಾನದಲ್ಲಿ ಸ್ವಲ್ಪ ಒರಟನಾಗಿ ಕಾಣಿಸಿಕೊಂಡ್ರೂ ಮಾನವಿಯತೆಯ ವಿಚಾರ ಬಂದಾಗ ಒಂದು ಹೆಜ್ಜೆ ಮುಂದಿರುತ್ತಾರೆ.
ದೇಶದ ಮೇಲಿನ ಪ್ರೀತಿ, ಸೇನೆ ಮೇಲಿನ ಗೌರವ ಹಾಗೂ ಸಮಾಜ ಸೇವೆ ಮಾಡುವ ಗುಣವನ್ನು ಗೌತಮ್ ಗಂಭೀರ್ ಮೈಗೂಡಿಸಿಕೊಂಡಿದ್ದಾರೆ.
ಕ್ರಿಕೆಟಿಗನಾಗಿರುವಾಗಲೇ ಗೌತಮ್ ಗಂಭೀರ್ ಫೌಂಡೇಶನ್ ಮೂಲಕ ಸಮಾಜ ಮುಖಿ ಕಾರ್ಯಗಳ ಮೂಲಕ ಜನ ಮನ್ನಣೆ ಕೂಡ ಪಡೆದುಕೊಂಡಿದ್ದರು. ಆದಾದ ನಂತರ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಮನಸೋತ ಗೌತಮ್ ಗಂಭೀರ್ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡ್ರು. ಅಲ್ಲದೆ ಪೂರ್ವ ದೆಹಲಿ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವನ್ನು ದಾಖಲಿಸಿದ್ದರು.
ಕ್ರಿಕೆಟ್, ಕಾಶ್ಮೀರ, ಪಾಕ್ ವಿಚಾರ ಸೇರಿದಂತೆ ಅನೇಕ ವಿಷಯಗಳ ಕುರಿತಂತೆ ಟ್ವಿಟರ್ ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಗೌತಮ್ ಗಂಭೀರ್ ಈಗ ಸಮಾಜ ಮುಖಿ ಕಾರ್ಯದಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು, ತಮ್ಮ ಸಂಸದೀಯ ಕ್ಷೇತ್ರದಲ್ಲಿ ಕೇವಲ ಒಂದು ರೂಪಾಯಿಗೆ ಊಟವನ್ನು ನೀಡುವ ಜನ್ ರಸೋಯ್ ಕ್ಯಾಂಟಿನ್ ಗಳನ್ನು ಶುರು ಮಾಡಿದ್ದಾರೆ.
ದೆಹಲಿಯ ಗಾಂಧಿನಗರದಲ್ಲಿ ಮೊದಲ ಕ್ಯಾಂಟಿನ್ ಗೆ ಗಂಭೀರ್ ಚಾಲನೆ ನೀಡಿದ್ದಾರೆ. 2021ರ ಗಣರಾಜ್ಯೋತ್ಸವ ದಿನದಂದು ಅಶೋಕ ನಗರದಲ್ಲಿ ಎರಡನೇ ಕ್ಯಾಟಿಂಗ್ ಆರಂಭವಾಗಲಿದೆ. ಒಟ್ಟಾರೆ ಪೂರ್ವ ದೆಹಲಿಯ ಸಂಸದೀಯ ಕ್ಷೇತ್ರದಲ್ಲಿ 10 ಜನ್ ರಸೋಯ್ ಕ್ಯಾಂಟಿನ್ ಮೂಲಕ ಬಡ ಜನರಿಗೆ ಊಟ ನೀಡುವ ಕಾಯಕಕ್ಕೆ ಗಂಭೀರ್ ಕೈ ಹಾಕಿದ್ದಾರೆ.
ಬಡವರು ದಿನದ ಎರಡು ಹೊತ್ತು ಊಟಕ್ಕೂ ಪರದಾಡುತ್ತಿರುವ ಸ್ಥಿತಿಯನ್ನು ನಾನು ನೋಡಿದ್ದೇನೆ. ಧರ್ಮ, ಜಾತಿ ಹಾಗೂ ಆರ್ಥಿಕ ಸ್ಥಿತಿಗಳ ಜೊತೆಗೆ ಆರೋಗ್ಯ ಮತ್ತು ಪರಿಶುದ್ಧವಾದ ಆಹಾರವನ್ನು ತಿನ್ನುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ನಂಬಿದವನು ನಾನು. ಜನರ ಕಷ್ಟವನ್ನು ನೋಡಿ ನಾನು ಬೇಸರಗೊಂಡಿದ್ದೇನೆ. ಹೀಗಾಗಿ ಜನ್ ರಸೋಯ್ ಕ್ಯಾಂಟಿನ್ ಮೂಲಕ ಬಡ ಜನರಿಗೆ ಊಟ ನೀಡುವ ಆಧುನಿಕ ಮಾದರಿಯ ಕ್ಯಾಂಟಿನ್ ಗಳನ್ನು ಆರಂಭಿಸಿದ್ದೇನೆ. ಇಲ್ಲಿ ಒಂದು ರೂಪಾಯಿ ಕೊಟ್ಟು ಊಟ ಮಾಡಬಹುದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಗೌತಮ್ ಗಂಭೀರ್ ಪೌಂಡೇಶನ್ ಮತ್ತು ಗೌತಮ್ ಗಂಭೀರ್ ತನ್ನ ಸ್ವಂತ ಖರ್ಚಿನ ಮೂಲಕ ಈ ಕ್ಯಾಂಟಿನ್ ಅನ್ನು ಶುರು ಮಾಡಿದ್ದಾರೆ. ಸರ್ಕಾರದಿಂದ ಯಾವುದೇ ರೀತಿಯ ಆರ್ಥಿಕ ನೆರವನ್ನು ಪಡೆದುಕೊಂಡಿಲ್ಲ. ಕ್ಯಾಂಟಿನ್ ನಲ್ಲಿ ನೂರು ಜನರಿಗೆ ಏಕಕಾಲದಲ್ಲಿ ಊಟ ಮಾಡುವ ವ್ಯವಸ್ಥೆ ಇದೆ. ಸದ್ಯ ಕೋವಿಡ್ ಮಾರ್ಗಸೂಚಿ ಇರುವುದರಿಂದ 50 ಮಂದಿ ಊಟ ಮಾಡಬಹುದಾಗಿದೆ.
ಇನ್ನು ಊಟದಲ್ಲಿ ಅನ್ನ, ಕಾಳು ಹಾಗೂ ತರಕಾರಿ ಪದಾರ್ಥಗಳನ್ನು ನೀಡಲಾಗುತ್ತಿದೆ.
ಒಟ್ಟಿನಲ್ಲಿ ಗೌತಮ್ ಗಂಭೀರ್ ತನ್ನ ಆಟದ ಮೂಲಕ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದ್ದಾರೆ. ಇದೀಗ ಸಮಾಜ ಸೇವೆಯ ಮೂಲಕ ಜನ ಮನ್ನಣೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಗೌತಮ್ ಗಂಭೀರ್ ರೀತಿಯಲ್ಲೇ ಎಲ್ಲಾ ಸಂಸದರು ಯೋಚನೆ ಮಾಡಿ ಕೆಲಸ ಮಾಡಿದ್ರೆ ದೇಶದಲ್ಲಿ ಬಡವರ ಹಸಿವನ್ನು ನೀಗಿಸಬಹುದು.