ಬೆಂಗಳೂರು: ಇಂದು ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಸದ್ಯದ ಬೆಳವಣಿಗೆಗಳ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅದರಲ್ಲೂ ಸಂಪುಟ ವಿಸ್ತರಣೆ ಬಳಿಕ ಪಕ್ಷದ ಕೆಲ ನಾಯಕರು ಅಸಮಾಧಾನಗೊಂಡಿದ್ದು, ಅತೃಪ್ತರು ತಮ್ಮ ಅಹವಾಲುಗಳನ್ನು ನಡ್ಡಾ ಬಳಿ ಹೇಳಿಕೊಳ್ಳಲಿದ್ದಾರೆ.
ಉಮೇಶ್ ಕತ್ತಿ ಮನವೊಲಿಕೆಗೆ ಯತ್ನ!
ಸಂಪುಟ ವಿಸ್ತರಣೆ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಉಮೇಶ್ ಕತ್ತಿ, ಪಕ್ಷದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಉಮೇಶ್ ಕತ್ತಿ, ಎಸ್.ಎ ರಾಮದಾಸ್ ಅವರ ಜೊತೆ ಜೆ.ಪಿ ನಡ್ಡಾ ಮಾತುಕತೆ ನಡೆಸಲಿದ್ದಾರೆ.
ಇಂದು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ನೇರವಾಗಿ ಪಕ್ಷದ ಕಚೇರಿ ಅಥವಾ ಕುಮಾರ ಕೃಪಾ ಅತಿಥಿ ಗೃಹಕ್ಕೆ ತೆರಳಲಿದ್ದಾರೆ. ನಂತರ ಎಚ್‌ಎಸ್‌ಆರ್ ಲೇಔಟ್ ಬಳಿಯ ಆಕ್ಸ್ಫರ್ಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಇದರ ನಡುವೆ ಸರ್ಕಾರದಲ್ಲಿ ಕೆಲವರ ಹಸ್ತಕ್ಷೇಪದ ದೂರುಗಳೂ ಬಂದಿರುವುದರಿಂದ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಚೌಕಟ್ಟಿನಲ್ಲಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಸೂತ್ರಗಳನ್ನು ಜೆ.ಪಿ.ನಡ್ಡಾ ರೂಪಿಸಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.








