ಮಗನಿಗೆ ಯಾರು ಟಿಕೆಟ್ ಕೊಡುತ್ತಾರೊ ಆ ಪಕ್ಷಕ್ಕೆ ಜೈ | ಜಿಟಿಡಿ ಪುತ್ರ ವ್ಯಾಮೋಹ – Saaksha Tv
ಮೈಸೂರು: ನನಗೂ ಮತ್ತು ನನ್ನ ಪುತ್ರನಿಗೂ ಯಾವ ಪಕ್ಷ ಟಿಕೆಟ್ ನೀಡತ್ತೊ ಆಪಕ್ಷಕ್ಕೆ ಹೋಗುತ್ತೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಈ ನಡುವೆ ಬಿಜೆಪಿಯವರು ಕೂಡ ತಂದೆ, ಮಗ ಇಬ್ಬರಿಗೂ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನಮ್ಮ ಜೊತೆ ಇರಿ ಎಂದು ಕೇಳುತ್ತಿದ್ದಾರೆ. ನಾನು ಸದ್ಯಕ್ಕೆ ಯಾವ ನಿರ್ಧಾರ ಕೈಗೊಂಡಿಲ್ಲ. ಇನ್ನೂ 6 ತಿಂಗಳ ನಂತರ ಚಾಮುಂಡಿ ತಾಯಿಯ ನಿರ್ಣಯದಂತೆ ನಾನು ನಿರ್ಧಾರ ಕೈಗೊಳ್ಳುತ್ತೇನೆ. ಚಾಮುಂಡಿ ದೇವಿಯ ಅನುಗ್ರಹದಂತೆಯೇ ನನ್ನ ನಿರ್ಧಾರ ಎಂದು ತಿಳಿಸಿದ್ದಾರೆ.
ನನ್ನ ಮಗ ಹರೀಶ್ ಗೌಡನಿಗೆ ಟಿಕೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷ ತನ್ನ ತೀರ್ಮಾನ ಹೇಳಿದ ಬಳಿಕ ಮುಂದಿನ ಮಾತುಕತೆ ನಡೆಸುತ್ತೇನೆ. ಹುಣಸೂರು ಕ್ಷೇತ್ರ ಮೊದಲ ಆದ್ಯತೆ, ಕೆ.ಆರ್.ನಗರ ಎರಡನೇ ಆದ್ಯತೆ, ಚಾಮರಾಜ ಕ್ಷೇತ್ರ ಮೂರನೇ ಆದ್ಯತೆ. ಈ ಮೂರರಲ್ಲಿ ಕಾಂಗ್ರೆಸ್ ಯಾವುದೇ ಒಂದು ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಖಚಿತವಾದರೆ, ನಾನು ಕಾಂಗ್ರೆಸ್ ಪಕ್ಷವನ್ನೇ ಸೇರುತ್ತೇನೆ. ಜೊತೆಗೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಜಿ.ಟಿ.ದೇವೇಗೌಡ ತಿಳಿಸಿದರು.
ಜೆಡಿಎಸ್ನವರು ನನ್ನನ್ನು ಇದುವರೆಗೂ ಸಂಪರ್ಕಿಸಿಲ್ಲ. ಪಕ್ಷದ ಯಾವ ಸಭೆ, ಸಮಾರಂಭಕ್ಕೂ ಕರೆಯುತ್ತಿಲ್ಲ. ಸಿಎಂ ಸ್ಥಾನದಿಂದ ಹೆಚ್.ಡಿ.ಕುಮಾರಸ್ವಾಮಿ ಕೆಳಗೆ ಇಳಿದ ನಂತರದ ದಿನದಿಂದ ನನ್ನ ಜೊತೆ ಜೆಡಿಎಸ್ನವರು ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾರೆ.