ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಮತ್ತು ಬೆಲೆ ಕುಸಿತದಿಂದ ರೈತರು ಕಂಗಾಲಾಗಿರುವ ಸಂದರ್ಭದಲ್ಲಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲು ತೆಗೆದುಕೊಂಡಿರುವ ನಿರ್ಧಾರ ಈಗ ರಾಜಕೀಯವಾಗಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಜಾರಿಗೊಳಿಸಲಾದ ಈ ಒನ್ ಟೈಮ್ ಸೆಟ್ಲ್‌ಮೆಂಟ್ (ಒಟಿಎಸ್) ಯೋಜನೆಯು ಅಲ್ಪಸಂಖ್ಯಾತರ ಓಲೈಕೆಯ ಪರಮಾವಧಿ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.
ದಶಕದ ಸಾಲ ಮತ್ತು ಸರ್ಕಾರದ ಲೆಕ್ಕಾಚಾರ
ವಿವಾದದ ಕೇಂದ್ರಬಿಂದುವಾಗಿರುವ ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, 2013-14 ರಿಂದ 2018-19ರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ನೀಡಲಾಗಿತ್ತು. ಈ ಸಾಲದ ಬಡ್ಡಿ ಮನ್ನಾಕ್ಕೆ ಈಗ ಅನುಮೋದನೆ ದೊರೆತಿದೆ.
ಅಂಕಿಅಂಶಗಳ ಪ್ರಕಾರ, ಒಟ್ಟು 1.94 ಲಕ್ಷ ಫಲಾನುಭವಿಗಳು ನಿಗಮದಿಂದ ಸುಮಾರು 981 ಕೋಟಿ ರೂ.ಗಳಷ್ಟು ಮೂಲ ಸಾಲವನ್ನು ಪಡೆದಿದ್ದರು. ಆದರೆ ಸಾಲ ವಸೂಲಾತಿಯಲ್ಲಿ ನಿಗಮವು ಸಂಪೂರ್ಣವಾಗಿ ಹಿಫಲವಾಗಿದ್ದು, ಈವರೆಗೆ ಕೇವಲ 98.18 ಕೋಟಿ ರೂ. ಮಾತ್ರ ವಸೂಲಾಗಿದೆ. ಇನ್ನೂ ಬರೋಬ್ಬರಿ 714.13 ಕೋಟಿ ರೂ. ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ, ಫಲಾನುಭವಿಗಳು ಕೇವಲ ಅಸಲನ್ನು ಪಾವತಿಸಿದರೆ ಸಾಕು, ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.
ರೈತರನ್ನು ಮರೆತ ಸರ್ಕಾರಕ್ಕೆ ಅಲ್ಪಸಂಖ್ಯಾತರೇ ಮುಖ್ಯವಾದರೇ
ಸರ್ಕಾರದ ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಬಿಜೆಪಿ ನಾಯಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ರೈತರು ಸಾಲಬಾಧೆಯಿಂದ ತತ್ತರಿಸುತ್ತಿದ್ದಾರೆ, ಬರಗಾಲದಿಂದ ಬೆಳೆ ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅನ್ನದಾತನ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಸರ್ಕಾರ, ಕೇವಲ ಒಂದು ನಿರ್ದಿಷ್ಟ ಸಮುದಾಯದ ಸಾಲದ ಬಡ್ಡಿಯನ್ನು ಮನ್ನಾ ಮಾಡಲು ಇಷ್ಟೊಂದು ಆಸಕ್ತಿ ತೋರಿಸುತ್ತಿರುವುದೇಕೆ ಎಂಬ ಪ್ರಶ್ನೆಗಳು ಎದ್ದಿವೆ. ಇದು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ತುಷ್ಟೀಕರಣ ರಾಜನೀತಿ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ.
ಆರ್ಥಿಕ ಇಲಾಖೆಯ ಎಚ್ಚರಿಕೆಗೂ ಡೋಂಟ್ ಕೇರ್ ಎಂದ ಸರ್ಕಾರ
ಗಮನಾರ್ಹ ಸಂಗತಿಯೆಂದರೆ, ಸ್ವತಃ ರಾಜ್ಯ ಹಣಕಾಸು ಇಲಾಖೆಯೇ ಈ ಪ್ರಸ್ತಾವನೆಗೆ ಆರಂಭದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಒಂದು ವೇಳೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಮಾತ್ರ ಬಡ್ಡಿ ಮನ್ನಾ ಸೌಲಭ್ಯ ನೀಡಿದರೆ, ಅದು ಡೊಮಿನೋ ಎಫೆಕ್ಟ್ ಸೃಷ್ಟಿಸಬಹುದು ಎಂಬುದು ಇಲಾಖೆಯ ಆತಂಕವಾಗಿತ್ತು.
ಅಂದರೆ, ಇದನ್ನು ಮಾದರಿಯಾಗಿಟ್ಟುಕೊಂಡು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ ಇತರೆ ನಿಗಮಗಳೂ ಇದೇ ರೀತಿಯ ರಿಯಾಯಿತಿಗೆ ಬೇಡಿಕೆ ಇಡುವ ಸಾಧ್ಯತೆಯಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಬೊಕ್ಕಸಕ್ಕೆ ಇದು ಹೆಚ್ಚಿನ ಹೊರೆಯಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದರು. ಆದರೂ, ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ನಿಗಮದ ಸಮರ್ಥನೆ ಏನು
ಈ ಎಲ್ಲಾ ರಾಜಕೀಯ ಮತ್ತು ಆರ್ಥಿಕ ಟೀಕೆಗಳ ನಡುವೆಯೂ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಸಾಲವನ್ನು ವಸೂಲಿ ಮಾಡಲು ಇದೊಂದು ಪ್ರಾಯೋಗಿಕ ಮಾರ್ಗವಾಗಿದೆ ಎಂಬುದು ನಿಗಮದ ವಾದ.
ಈಗಿರುವ ಲೆಕ್ಕಾಚಾರದ ಪ್ರಕಾರ, ಸುಮಾರು 14 ಕೋಟಿ ರೂ.ಗಳಷ್ಟು ಬಡ್ಡಿಯನ್ನು ಮನ್ನಾ ಮಾಡುವುದರಿಂದ, ಫಲಾನುಭವಿಗಳು ಉತ್ಸುಕರಾಗಿ ಬಾಕಿ ಉಳಿದಿರುವ ಅಸಲನ್ನು ಪಾವತಿಸಲು ಮುಂದೆ ಬರುತ್ತಾರೆ. ಇದರಿಂದ ಸುಮಾರು 150 ಕೋಟಿ ರೂ.ಗಳಷ್ಟು ಅಸಲು ಹಣವನ್ನು ನಿಗಮವು ಮರಳಿ ಪಡೆಯಬಹುದು. ಸಾಲದ ಹಣ ಸಂಪೂರ್ಣವಾಗಿ ಮುಳುಗಿ ಹೋಗುವುದಕ್ಕಿಂತ, ಬಡ್ಡಿ ಬಿಟ್ಟುಕೊಟ್ಟು ಅಸಲನ್ನಾದರೂ ಉಳಿಸಿಕೊಳ್ಳುವುದು ಜಾಣತನದ ಕ್ರಮ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಈ ನಡೆ ರಾಜಕೀಯ ಕೆಸರೆರಚಾಟಕ್ಕೆ ಹೊಸ ವೇದಿಕೆ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.








