ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಕರ್ನಾಟಕದ 8 ಜಿಲ್ಲೆಗಳ ಬಿಜೆಪಿ ಕಾರ್ಯಾಲಯ ಮತ್ತು 1 ಮಂಡಲ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದೆಹಲಿಯಿಂದಲೇ ವರ್ಚುವಲ್ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಪಕ್ಷದ ಕಾರ್ಯಾಲಯಗಳು ಮನೆ ಅಲ್ಲ, ಸಂಸ್ಕಾರ ಇರುವ ಕೇಂದ್ರಗಳು ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಿವಿಮಾತು ನೀಡಿದರು.
ಇನ್ನೂ ಮುಂದುವರೆದು ಮಾತನಾಡಿದ ನಡ್ಡಾ ಅವರು ಕಾರ್ಯಾಲಯ ಜನ ಸೇರುವ ಸ್ಥಳ. ಕಾರ್ಯಕರ್ತರು ಪಕ್ಷದ ನಾಯಕರನ್ನು ಪಕ್ಷದ ಕಾರ್ಯಾಲಯಗಳಲ್ಲಿ ಭೇಟಿ ಮಾಡುವುದು ಒಂದು ಸಂಸ್ಕಾರ. ಕಾರ್ಯಾಲಯಗಳಿಗೆ ಬರುವುದರಿಂದ ಕಾರ್ಯಕರ್ತರ ರಾಜಕೀಯ ದೃಷ್ಟಿಕೋನ, ನಿಲುವು ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಇತ್ತೀಚೆಗೆ ಪ್ರಧಾನಿ ಅವರು ಕೃಷಿ ಪ್ಯಾಕೇಜ್ ಘೋಷಿಸಿದ್ದು, ಇದನ್ನು ಕರ್ನಾಟಕ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕೃಷಿ ವಲಯದ ಚಿತ್ರಣವನ್ನು ಬದಲಾಯಿಸಬೇಕಿದೆ ಎಂದು ಸಲಹೆ ನೀಡಿದರು.
ಇನ್ನೂ ಇದೇ ವೇಳೆ, ತಮ್ಮ ಅಧಿಕೃತ ನಿವಾಸ ಕಾವೇರಿಯಿಂದ ವರ್ಚುವಲ್ ಮೂಲಕ ನಡ್ಡಾ ಅವರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಇಂದು ನಮಗೆಲ್ಲ ಪ್ರೇರಣಾದಾಯಕ ದಿನ. ಅಮಿತ್ ಷಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜಿಲ್ಲೆಗಳು, ತಾಲ್ಲೂಕುಗಳಲ್ಲಿ ಭವನಗಳಿರಬೇಕೆಂದು ಅಪೇಕ್ಷೆ ಪಟ್ಟಿದ್ದರು. ಜನರ ಅಹವಾಲು ಸ್ವೀಕೃತ, ಸಮಸ್ಯೆಗಳ ಬಗೆಹರಿಸಲು ಭವನಗಳು ನೆರವಾಗುತ್ತವೆ ಎಂದು ಹೇಳಿದರು. ಇನ್ನೂ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.







