ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಗೈರಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೈಲಿಗಲ್ಲು ಕಾರ್ಯಕ್ರಮಕ್ಕೆ ಸ್ವತಃ ಎಐಸಿಸಿ ಅಧ್ಯಕ್ಷರೇ ಬೆನ್ನು ತೋರಿಸಿರುವುದು ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಿದ್ದು, ದೆಹಲಿಗೆ ತಲುಪಬೇಕಾದ ಲೆಕ್ಕದಲ್ಲಿ ವ್ಯತ್ಯಾಸವಾಗಿದೆಯೇ ಎಂದು ಬಿಜೆಪಿ ಕಟುವಾಗಿ ಪ್ರಶ್ನಿಸಿದೆ.
ಅದ್ದೂರಿ ವೇದಿಕೆ ಸಿದ್ದವಿದ್ದರೂ ನಾಯಕರು ನಾಪತ್ತೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಸಾವಿರ ದಿನಗಳು ಕಳೆದಿವೆ. ಈ ಸಾಧನೆಯನ್ನು ಸಂಭ್ರಮಿಸಲು ಹಾವೇರಿಯಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಆದರೆ, ಈ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು ಯಾರೂ ಕಂಡುಬರಲಿಲ್ಲ. ವಿಶೇಷವೇನೆಂದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲೇ ಇದ್ದರು. ಬೆಂಗಳೂರಿನಲ್ಲಿ ನಡೆದ ದಿವಂಗತ ಭೀಮಣ್ಣ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖರ್ಗೆಯವರು, ಅಲ್ಲಿಂದ ಹಾವೇರಿಯ ಸರ್ಕಾರಿ ಕಾರ್ಯಕ್ರಮಕ್ಕೆ ಹೋಗದೆ ಅಂತರ ಕಾಯ್ದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಒಳಜಗಳದ ಸಂದೇಶವೇ ಈ ಗೈರು ಹಾಜರಿ?
ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗುಸುಗುಸು ಜೋರಾಗಿದೆ. ಅಧಿಕಾರ ಹಂಚಿಕೆ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಎಷ್ಟೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ರಾಜ್ಯ ನಾಯಕರು ಮತ್ತು ಅವರ ಬೆಂಬಲಿಗರು ಈ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇದ್ದಾರೆ. ಹೈಕಮಾಂಡ್ ಆದೇಶವನ್ನು ಧಿಕ್ಕರಿಸಿ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ಬೇಸತ್ತಿರುವ ವರಿಷ್ಠರು, ರಾಜ್ಯ ನಾಯಕರಿಗೆ ಖಡಕ್ ಸಂದೇಶ ರವಾನಿಸುವ ಸಲುವಾಗಿಯೇ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ದೆಹಲಿ ಲೆಕ್ಕದಲ್ಲಿ ವ್ಯತ್ಯಾಸವಾಯಿತೇ? ಆರ್ ಅಶೋಕ ವ್ಯಂಗ್ಯ
ಕಾಂಗ್ರೆಸ್ ಹೈಕಮಾಂಡ್ ಗೈರು ಹಾಜರಿಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾವಿರಾರು ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಂಭ್ರಮಾಚರಣೆ ಬಗ್ಗೆ ಕರ್ನಾಟಕದ ಜನತೆಗೆ ಮಾತ್ರವಲ್ಲ, ಸ್ವತಃ ಕಾಂಗ್ರೆಸ್ ಹೈಕಮಾಂಡ್ಗೂ ಹೇಸಿಗೆ ಹುಟ್ಟಿದಂತಿದೆ ಎಂದು ಲೇವಡಿ ಮಾಡಿದ್ದಾರೆ.
ಮುಂದುವರಿದು ಗಂಭೀರ ಆರೋಪ ಮಾಡಿರುವ ಅಶೋಕ, ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸಂಭ್ರಮಾಚರಣೆಗೆ ಹೈಕಮಾಂಡ್ ಯಾಕೆ ಬರಲಿಲ್ಲ? ಎಐಸಿಸಿ ಅಧ್ಯಕ್ಷರು ರಾಜ್ಯದಲ್ಲೇ ಇದ್ದರೂ ಸಮಾವೇಶಕ್ಕೆ ಬಾರದಿರಲು ಕಾರಣವೇನು? ದೆಹಲಿಗೆ ಕಳುಹಿಸಬೇಕಾದ ಲೆಕ್ಕದಲ್ಲಿ ಅಥವಾ ಕಪ್ಪ ಕಾಣಿಕೆಯಲ್ಲಿ ಏನಾದರೂ ಕಡಿಮೆ ಆಯಿತಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಹೈಕಮಾಂಡ್ ನಾಯಕರನ್ನು ಕಾರ್ಯಕ್ರಮಕ್ಕೆ ತಾವು ಆಹ್ವಾನಿಸಲೇ ಇಲ್ಲವೇ ಅಥವಾ ಅವರು ನಿಮ್ಮನ್ನು ನಿರ್ಲಕ್ಷಿಸಿದರೆ ಎಂದು ವ್ಯಂಗ್ಯವಾಡಿದ್ದಾರೆ.
ಸಾವಿರ ದಿನಗಳ ಸಂಭ್ರಮದ ಖುಷಿಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಹೈಕಮಾಂಡ್ ಗೈರು ಹಾಜರಿ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ವಿಪಕ್ಷಗಳ ಟೀಕೆಗೆ ಹೊಸ ಸರಕು ಒದಗಿಸಿದಂತಾಗಿದೆ.








