ರಾಮ ಮಂದಿರ ಭೂಮಿ ಪೂಜೆಗೆ ಠಾಕೂರ್ ನಗರದ ಮಣ್ಣು ಮತ್ತು ನೀರು ತುಂಬಿದ ಕಳಶವನ್ನು ಕಳುಹಿಸಿದ ಬಿಜೆಪಿ
ಕೊಲ್ಕತ್ತಾ, ಜುಲೈ 31: ಅಯೋಧ್ಯೆಯ ಪ್ರಸ್ತಾವಿತ ರಾಮ ಮಂದಿರ ‘ಭೂಮಿ ಪೂಜೆಗೆ’ ಬೊಂಗಾಂವ್ನಲ್ಲಿರುವ ಮಾಟುವಾಸ್ನ ಧಾರ್ಮಿಕ ಕೇಂದ್ರವಾದ ಠಾಕೂರ್ ನಗರದಿಂದ ಮಣ್ಣು ಮತ್ತು ನೀರು ತುಂಬಿದ ಕಳಶವನ್ನು ಬಿಜೆಪಿ ಕಳುಹಿಸಿ ಕೊಟ್ಟಿದೆ.
ಬೊಂಗಾಂವ್ ಬಿಜೆಪಿ ಸಂಸದ ಶಾಂತನು ಠಾಕೂರ್, ಪವಿತ್ರ ಮಣ್ಣನ್ನು ವಿಶ್ವ ಹಿಂದೂ ಪರಿಷತ್ ಮೂಲಕ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು. “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಾ ಬಿಜೆಪಿ ಸಂಸದ ಮತ್ತು ಅವರ ಬೆಂಬಲಿಗರ ನೇತೃತ್ವದ ಮಾಟುವಾ ಸಮುದಾಯದ ಸದಸ್ಯರು ಗುರುವಾರ ಬೆಳಿಗ್ಗೆ ಹರಿಚಂದ್ ಠಾಕೂರ್ ದೇಗುಲದಿಂದ ಮಣ್ಣು ಮತ್ತು ನೀರು ಹೊಂದಿರುವ ಹಿತ್ತಾಳೆ ಕಳಶವನ್ನು ಕೊಂಡೊಯ್ದರು.
ಪ್ರಪಂಚದಾದ್ಯಂತದ ಹಿಂದೂಗಳಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಒಂದೇ ಒಂದು ಆಸೆ ಇತ್ತು. ಆಗಸ್ಟ್ 5 ರಂದು ರಾಮ ಮಂದಿರಕ್ಕೆ ಅಡಿಪಾಯ ಹಾಕಲಾಗುವುದು ಮತ್ತು ಭಾರತದಾದ್ಯಂತದ ಎಲ್ಲಾ ಧಾರ್ಮಿಕ ಸ್ಥಳಗಳಿಂದ ಮಣ್ಣು ಮತ್ತು ನೀರನ್ನು ಸಂಗ್ರಹಿಸಲಾಗುತ್ತಿದೆ. ನಾವು ಈ ಉಪಕ್ರಮದ ಭಾಗವಾಗಲು ಠಾಕೂರ್ ನಗರದಿಂದ ಮಣ್ಣನ್ನು ಅಯೋಧ್ಯೆಗೆ ಕಳುಹಿಸಬೇಕೆಂದು ಬಯಸಿದ್ದೇವೆ. ವಿಎಚ್ಪಿ ಸದಸ್ಯರು ಪವಿತ್ರ ಮಣ್ಣನ್ನು ಸಂಗ್ರಹಿಸಲು ಬಂದಿದ್ದಾರೆ. ಈ ಪವಿತ್ರ ಅಭಿಯಾನದಲ್ಲಿ ಭಾಗಿಯಾದ ನಾವು ಧನ್ಯರು ಎಂದು ಠಾಕೂರ್ ಹೇಳಿದ್ದಾರೆ.
ನಮ್ಮ ಪವಿತ್ರ ಭೂಮಿಯಿಂದ ಮಣ್ಣನ್ನು ರಾಮ ಮಂದಿರಕ್ಕಾಗಿ ಅಯೋಧ್ಯೆಗೆ ಕಳುಹಿಸಿದಕ್ಕೆ ನಮಗೆ ಸಂತೋಷವಾಗಿದೆ. ಆದರೆ ಈ ಮಣ್ಣು ಅಯೋಧ್ಯೆಯಲ್ಲಿ ಮೊದಲ ಸ್ಥಾನಕ್ಕೆ ತಲುಪುತ್ತದೆ ಎಂದು ನಾವು ನಂಬುವುದಿಲ್ಲ ಎಂದು ಹೇಳಿದ ಟಿಎಂಸಿ ಯೂತ್ ಕಾಂಗ್ರೆಸ್ ನ ಉತ್ತರ 24 ಪರಗಣ ಜಿಲ್ಲೆಯ ಉಸ್ತುವಾರಿ ಅಭಿಜಿತ್ ಬಿಸ್ವಾಸ್ ಇದು ರಾಜಕೀಯವಲ್ಲದೆ ಮತ್ತೇನಲ್ಲ ಎಂದು ಟೀಕಿಸಿದ್ದಾರೆ.