ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಡಿ.ಕೆ ಶಿವಕುಮಾರ್ ಆಯ್ಕೆ ಕಾಂಗ್ರೆಸ್ ಪಾಳಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಆದ್ರೆ ಬಿಜೆಪಿ ಪಾಳಯದಲ್ಲಿ ಮಾತ್ರ ತಳಮಳ ಶುರುವಾಗಿದೆ. ಈಗಾಗಲೇ ಕೇಸರಿ ಪಾಳಯದಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿದ್ದು, ನಾನಾ ಚಟುವಟಿಕೆಗಳು ಗರಿಗೆದರಿವೆ.
ಬಿಜೆಪಿಯಲ್ಲಿ ಡಿಕೆಶಿ ಬಗ್ಗೆ ಬಿಸಿ ಬಿಸಿ ಚರ್ಚೆ
ಹೌದು..! ಸದ್ಯ ರಾಜ್ಯ ಬಿಜೆಪಿಯಲ್ಲಿ ಡಿಕೆಶಿಯದ್ದೇ ಚರ್ಚೆ. ಗುರುವಾರ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಟ್ರಬಲ್ ಶೂಟರ್ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಹಾಗಾದ್ರೆ ಡಿಕೆಶಿ ಬಗ್ಗೆ ಬಿಜೆಪಿ ತಲೆಕಡಿಸಿಕೊಳ್ಳಲು ಕಾರಣವೇನು ಎಂಬುದನ್ನು ನೋಡೋದಾದ್ರೆ..
ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಕಾಂಗ್ರೆಸ್ ನ ಬಲ ಡಬಲ್ ಆಗಿದೆ. ಹಾಗೇ ಕಾಂಗ್ರೆಸ್ ನಲ್ಲಿ ಕೆಲವೊಂದು ಬದಲಾವಣೆಗಳಾಗಿದ್ದು, ಪಕ್ಷ ಸಂಘಟನೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ಇದು ಒಂದು ಕಡೆಯಾದ್ರೆ ಶಾಸಕರು, ಸ್ಥಳೀಯ ಮುಖಂಡರು ಪಕ್ಷಾಂತರ ಆಗುವ ಸಾಧ್ಯತೆ ಮತ್ತು ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ನತ್ತ
ಸೆಳೆಯುವ ತಾಕತ್ತು ಡಿ.ಕೆ.ಶಿವಕುಮಾರ್ ಅವರಿಗೆ ಇರುವುದರಿಂದ ಬಿಜೆಪಿಯಲ್ಲಿ ತಳಮಳ ಶುರುವಾಗಿದೆ ಎನ್ನಲಾಗಿದೆ.
ಡಿಕೆ ಎಫೆಕ್ಟ್: ಬೆಂಗಳೂರಿಗೆ ಜೆ.ಪಿ ನಡ್ಡಾ!?
ಇಂದು ಬಿಜೆಪಿ ಸಾರಥಿ ಜೆ.ಪಿ ನಡ್ಡಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ರಾಜ್ಯ ನಾಯಕರು ಅವರ ಜೊತೆ ಡಿಕೆಶಿ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ಇದನ್ನು ಮನಗಂಡಿರುವ ನಡ್ಡಾ, ಅದಕ್ಕೆ ಪ್ರತಿಯಾಗಿ ತಮ್ಮ ಪಡೆಯನ್ನು ಕೂಡ ಸಜ್ಜುಗೊಳಿಸುವುದು ಮತ್ತು ಪ್ರಬಲವಾಗಿ ಕಾಂಗ್ರೆಸ್ ಎದುರಿಸುವ ಕುರಿತಂತೆಯೂ ಕೆಲ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.