ಬೆಂಗಳೂರು : ಬಿಜೆಪಿಯ ಕೇಂದ್ರ ಸಮಿತಿ ಮೊದಲಿಂದಲೂ ಸಾಕಷ್ಟು ನಿಗೂಡತೆ ಕಾಪಾಡಿಕೊಂಡು ಬಂದಿದೆ. ಇಲ್ಲಿ ಸಾಮಾನ್ಯನು ನಾಯಕನಾಗಬಲ್ಲ, ನಾಯಕ ಸಾಮಾನ್ಯನಾಗಬಲ್ಲ. ಬಿಜೆಪಿಯಲ್ಲಿ ಯಾರು ಯಾವ ಹುದ್ದೆ ಏರುತ್ತಾರೆ ಎಂಬುದು ಕೊನೆಯವರೆಗೂ ನಿಗೂಡವಾಗಿರುತ್ತದೆ. ಇದು ರಾಜ್ಯಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಕಳೆದ ಒಂದುವಾರ ದಿಂದ ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಕಾಡುತ್ತಿತ್ತು. ಜೊತೆಗೆ ಬಿಜೆಪಿಯಿಂದ ಟಿಕೆಟ್ ಪಡೆದು ರಾಜ್ಯಸಭೆ ಪ್ರವೇಶ ಮಾಡಬೇಕೆಂದು ಅನೇಕರು ಪ್ರಯತ್ನಿಸಿದರು.ಅದರಲ್ಲೂ ಪ್ರಮುಖವಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರುಗಳನ್ನು ಮುನ್ನೆಲೆಗೆ ಬಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಫೈನಲ್ ಆಗಿ ಕೇಂದ್ರಕ್ಕೆ ಶಿಫಾರಸ್ಸು ಆಗಿದ್ದವು. ಆದರೆ ಅಂತಿಮ ಕ್ಷಣದಲ್ಲಿ ಅಚ್ಚರಿ ಮೂಡುವಂತೆ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾದವರು ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ.
ಆ ಮೂಲಕ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ರಾಜ್ಯಸಭೆ ಪ್ರವೇಶಿಸುವ ಕನಸು ಭಗ್ನಗೊಂಡಿದೆ. ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರುಗಳು ರಾಜ್ಯದ ಬಿಜೆಪಿ ನಾಯಕರು ಪೈನಲ್ ಮಾಡಿ ಕೇಂದ್ರಕ್ಕೆ ಕಳಿಸಿದ್ದರು. ಜೂನ್ 7 ರಂದು ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ಮಾತ್ರ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಫೈನಲ್ ಆಗಿವೆ.
ಬಿಜೆಪಿ ಮೊದಲಿಂದಲೂ ಈ ನಿಗೂಡತೆ ಕಾಪಾಡಿಕೊಂಡು ಬಂದಿದೆ. ಈ ಹಿಂದೆ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿತ್ತು. ಯಾರನ್ನು ಸಿಎಂ ಮಾಡುತ್ತೆ ಬಿಜೆಪಿ ಎಂದು ಎಲ್ಲರ ದೇಶದ ಗಮನ ಉತ್ತರಪ್ರದೇಶದ ಮೇಲೆ ಇತ್ತು. ಅಲ್ಲದೆ ಬಿಜೆಪಿ ಅನುಭವಿ ರಾಜಕಾರಣಿಗಳು ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಬಿಜೆಪಿ ಸೆಂಟ್ರಲ್ ಕಮಿಟಿ ಮಾತ್ರ ಅಚ್ಚರಿ ಮೂಡುವಂತೆ ಯೋಗಿ ಆಧಿತ್ಯನಾಥ್ ಹೆಸರು ಘೋಷಣೆ ಮಾಡಿತ್ತು. ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಅದೇ ಮಾದರಿಯ ಅಚ್ಚರಿ ಮೂಡುವಂತೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಫೈನಲ್ ಆಗಿವೆ.
ನಿಗೂಡತೆಯ ಹಿಂದೆ ಇರುವವರು ಯಾರು
ಬಿಜೆಪಿಯನ್ನು ಆರ್.ಎಸ್.ಎಸ್ ಸದಾ ಆಪರೇಟ್ ಮಾಡುತ್ತೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ. ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲೂ ಆರ್.ಎಸ್.ಎಸ್ ತನ್ನ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ. ಬಿ.ಎಲ್ ಸಂತೋಷ್ ಬಿಜೆಪಿ ಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ನಿಧಾನಗತಿಯಲ್ಲಿ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಾಗುತ್ತಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು ಬಿ.ಎಲ್ ಸಂತೋಷ್ ಎಂಬ ಟಾಕ್ ಇದೆ. ಇದೀಗ ರಾಜ್ಯಸಭೆ ಚುನಾವಣೆಗೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಪ್ರಮುಖ ಕಾರಣ ಬಿ.ಎಸ್ ಸಂತೋಷ್ ಎಂದು ಹೇಳಾಗುತ್ತಿದೆ.
ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಆಯ್ಕೆ ಯಾಕೆ
ರಾಯಚೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿರುವ ಅಶೋಕ್ ಗಸ್ತಿ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದರು. ರಾಯಣ್ಣ ಬ್ರಿಗೇಡ್ ಚಟುವಟಿಕೆ ವೇಳೆ ಯಡಿಯೂರಪ್ಪ ವಿರುದ್ಧ ಬರೆದ ಪತ್ರದಲ್ಲಿ ಸಹಿ ಹಾಕಿದ್ದರು. ಜೊತೆಗೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿದ್ದರು, ಅಲ್ಲದೆ ಪ್ರಸ್ತುತ ಬಳ್ಳಾರಿ ವಿಭಾಗ ಪ್ರಭಾರಿಗಳಾಗಿದ್ದಾರೆ. ಅಲ್ಲದೆ ಮೊದಲಿಂದಲೂ ಸಂತೋಷ್ ಅವರ ಜೊತೆಗೆ ಉತ್ತಮ ಭಾಂದ್ಯವ ಹೊಂದಿದ್ದರು ಎನ್ನಲಾಗಿದೆ.
ಇನ್ನೂ ಈರಣ್ಣ ಕಡಾಡಿ ಸಹ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿದ್ದರು. ಪ್ರಸ್ತುತ ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿಗಳಾಗಿದ್ದಾರೆ. ಅಲ್ಲದೆ ಕಳೆದ ಮೂರು ದಶಕಗಳಿಂದ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಶ್ರಮಿಸಿದ್ದಾರೆ. ಈ ಕಾರಣಕ್ಕೆ ಬಿ.ಎಲ್ ಸಂತೋಷ್ ಇವರನ್ನು ಆಯ್ಕೆ ಮಾಡುವದರಲ್ಲಿ ಮುತುವರ್ಜಿವಹಿಸಿದ್ದರು ಎನ್ನಲಾಗಿದೆ. ಅಲ್ಲದೆ ಪಕ್ಷದಲ್ಲಿ ನಿಧಾಗತಿಯಾಗಿ ಆರ್.ಎಸ್.ಎಸ್ ಸಿದ್ದಾಂತವನ್ನು ಪಾಲಿಸುವವರನ್ನು ಬಲಗೊಳಿಸುತ್ತಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ತಮ್ಮ ಹಿಡಿತ ಬಿ.ಎಲ್ ಸಂತೋಷ್ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸು ಗುಸು ಮಾತುಕತೆ ನಡೆದಿದೆ.








