ಬಾಗಲಕೋಟೆ : ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ ಅವರು ಆಕ್ರೋಶ ಹೊರಹಾಕಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ತಾವು ಬ್ರಹ್ಮಾಂಡ ಭ್ರಷ್ಟಾಚಾರದಿಂದ ಗಳಿಸಿದ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಕೃಷಿಕರಲ್ಲದವರು ಭೂಮಿ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ದೂರಿದರು.
ಕೃಷಿಕರು ಹಾಗೂ ಕೃಷಿಭೂಮಿಯ ನಡುವೆ ತಾಯಿ-ಮಗುವಿನ ಕರುಳಿನ ಸಂಬಂಧವಿದೆ. ಈಗ ಅದನ್ನೇ ಬೇರ್ಪಡಿಸಲು ಹೊರಟಿದ್ದಾರೆ. ತಾಯಿಯನ್ನೇ ಮಾರಾಟ ಮಾಡಲು ಹೊರಟಿರುವ ಈ ಕಾರ್ಯ ನಾಡಿನ ನೆಲ-ಜಲದ ಪ್ರಶ್ನೆಯಾಗಿದೆ. ಈ ಕರಾಳ ಶಾಸನದ ವಿರುದ್ಧ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಒಂದಾಗಿ ಹೋರಾಟ ರೂಪಿಸಬೇಕಿದೆ. ಈ ಹೋರಾಟಕ್ಕೆ ನಾಡಿನ ಎಲ್ಲ ರೈತಾಪಿ ವರ್ಗ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಇನ್ನು ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರಾಜ್ಯದಲ್ಲಿ 58 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತರು ಭೂಮಿ ಕಳೆದುಕೊಂಡು ನಿರ್ಗತಿಕರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಪಾಟೀಲರು, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೊರರಾಜ್ಯದವರು ಬಂದು ಭೂಮಿ ಖರೀದಿಸಲಿದ್ದಾರೆ. ನಗರ ಪ್ರದೇಶದ ಸುತ್ತಲಿನ ಹಳ್ಳಿಗಳ ಜಮೀನು ರಿಯಲ್ ಎಸ್ಟೇಟ್ ಮಾಫಿಯಾದ ಪಾಲಾಗಲಿದೆ ಎಂದು ಹೇಳಿದರು.








