ಬೆಂಗಳೂರು : ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ಜಾತ್ಯಾತೀತ ಸಿದ್ದಾಂತವನ್ನು ಅನುಸರಿಸಿಕೊಂಡು ಬಂದಿದ್ದೇವೆ. ಬಿಜೆಪಿ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಬಾರದು ಎಂದು ನಮ್ಮ ಪಕ್ಷ ಈಗಾಗಲೇ ತೀರ್ಮಾನಕ್ಕೆ ಬಂದಿದೆ. ಜಾತ್ಯಾತೀತ ಪಕ್ಷಕ್ಕೆ ಪ್ರಯೋಜನವಾಗಬೇಕು, ನಾವು ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಿದ್ದು, ನಾವು ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರು ನನಗೆ ಅಗತ್ಯ ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ನಾನು ಬಹಿರಂಗವಾಗಿ ಚರ್ಚಿಸುವುದಿಲ್ಲ. ನಾನು ನಮ್ಮ ಎಲ್ಲ ಶಾಸಕರಿಗೂ ನಿರ್ದೇಶನ ನೀಡಿದ್ದು, ಯಾವುದೇ ಶಾಸಕರು ಬಿಜೆಪಿ ನಾಯಕರು, ಮಂತ್ರಿಗಳ ಜತೆ ಸಂಪರ್ಕ ಇಟ್ಟುಕೊಳ್ಳಬಾರದು. ಅವರು ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಕರೆದು ನಿಮ್ಮನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೀಗಾಗಿ ಯಾರೂ ಕೂಡ ಅವರ ಜತೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೇನೆ. ನಮ್ಮ ರಾಷ್ಟ್ರೀಯ ನಾಯಕರು ರಾಷ್ಟ್ರೀಯ ನಾಯಕರ ಜತೆ ಮಾತನಾಡುತ್ತಾರೆ, ಅವರ ಆದೇಶ ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
ಇದೆ ವೇಳೆ ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಬೆಂಬಲಿಸುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ವಿಚಾರದಲ್ಲಿ ನಮ್ಮ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತೆಗೆದುಕೊಳ್ಳುವ ವಿಚಾರದಲ್ಲಿ ನಾವು ಸ್ಥಳೀಯ ನಾಯಕರು ಆಕ್ಷೇಪ ಮಾಡುವುದಿಲ್ಲ. ಅವರು ನಮ್ಮ ಜತೆ ಚರ್ಚೆ ಮಾಡಿದ್ದಾರೆ. ಆದರೆ ಯಾವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಅವರೇ ತೀರ್ಮಾನಿಸುತ್ತಾರೆ. ಮಾಜಿ ಪ್ರಧಾನಿಯಾದವರನ್ನು ಆಯ್ಕೆ ಮಾಡುವ ಬಗ್ಗೆ ನಾನು ಮಾತನಾಡುವುದಲ್ಲ.
ಮಾಜಿ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ತಿಳಿಸಿದ್ದಾರೆ ಎಂದರೆ ನೀವೆ ತಿಳಿದುಕೊಳ್ಳಿ. ನಾವು ದೇಶದ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆಯೇ ಹೊರತು ವೈಯಕ್ತಿಕ ವಿಚಾರ ಬರುವುದಿಲ್ಲ. ರಾಷ್ಟ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಅವರು ತಮ್ಮ ಟ್ವೀಟ್ ನಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವುದು ಅವರ ದೊಡ್ಡಗುಣ. ನಾನು ಹಾಗೂ ನಮ್ಮ ಶಾಸಕಾಂಗ ಪಕ್ಷದ ನಾಯಕರು ಈಗಾಗಲೇ ಹೇಳಿದ್ದೇವೆ, ನಮ್ಮ ರಾಷ್ಟ್ರದ ನಾಯಕರು ಏನು ಹೇಳ್ತಾರೋ ಅದನ್ನು ನಾವು ಪಾಲಿಸುತ್ತೇವೆ. ಇನ್ನು ಅದರ ಬಗ್ಗೆ ಚರ್ಚೆ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ತತ್ವ ಹಾಗೂ ಸಿದ್ಧಾಂತ ಉಳಿದುಕೊಳ್ಳುವುದು ಮುಖ್ಯ ಎಂದರು.